ಕಲಬುರಗಿ: ಕಲಬುರಗಿಯ ಗಾಬೂರ್ ಲೇಔಟ್ನಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ಪತಿ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.
ಸಂತೋಷ್ ಕೊರಳಿ (45), ಅವರ ಪತ್ನಿ ಶೃತಿ (35), ಮತ್ತು ಇಬ್ಬರು ಮಕ್ಕಳಾದ ಮುನೀಶ್ (9) ಮತ್ತು ಮೂರು ತಿಂಗಳ ಅನೀಶ್ ಅವರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಸಂತೋಷ್ ಕಲಬುರಗಿಯ ಟೆಸ್ಕಾಂನಲ್ಲಿ ಸೀನಿಯರ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.
ಪ್ರಾಥಮಿಕ ತನಿಖೆ ವೇಳೆ, ಸಂತೋಷ್ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕೊಂದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕುಟುಂಬದೊಳಗಿನ ಕಲಹ ಇದರ ಹಿಂದಿನ ಕಾರಣವಿರಬಹುದೆಂದು ಶಂಕಿಸಲಾಗಿದೆ.
ಪೊಲೀಸ್ ಆಯುಕ್ತ ಡಾ. ಶರಣಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಈ ಪ್ರಕರಣ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿದೆ.
ಸಂಬಂಧಿಕರಿಂದ ಹೇಳಿಕೆಗಳನ್ನು ಸಂಗ್ರಹಿಸಿ, ಈ ದುರಂತ ಘಟನೆಗೆ ಕಾರಣವಾದ ಅಂಶಗಳನ್ನು ತನಿಖೆ ಮಾಡಲಾಗುತ್ತಿದೆ. ಈ ಘಟನೆಯಿಂದ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ.