ದಾವಣಗೆರೆ ಅ.22: ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ ವಿಧಾನ ಪರಿಷತ್ತಿನ ಚುನಾವಣೆ ನಿಮಿತ್ತ ಮತದಾನ ಅ.28 ನಡೆಯಲಿದ್ದು, ಪದವಿಧರ ಕ್ಷೇತ್ರ ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಾದ್ಯಂತ ಅ.26ರ ಸಂಜೆ 05 ಗಂಟೆಯಿಂದ ಅ.28 ರ ಸಂಜೆ 05 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಅವಧಿಯಲ್ಲಿ ಅ.28 ರಂದು ಮತದಾನ ಕೇಂದ್ರಗಳಿಗೆ ಮತ ಹಾಕಲು ಬರುವ ಮತದಾರರನ್ನು ಹೊರತುಪಡಿಸಿ ಉಳಿದಂತೆ 5 ಜನರ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದಾಗಲೀ, ಮಾರಕಾಸ್ತ್ರಗಳನ್ನು ವಿನಾಶಕಾರಿ ವಸ್ತುಗಳನ್ನು ಒಯ್ಯುವಂತಿಲ್ಲ ಅಲ್ಲದೆ ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಪಂಗಡಗಳು ಮೆರವಣಿಗೆ, ಪ್ರತಿಭಟನೆ ನಡೆಸುವಂತಿಲ್ಲ.
ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ಹಾಗೂ ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಿಗೆ ಪ್ರಾರ್ಥನೆಗೆ ತೆರಳುವವರಿಗೆ, ಇನ್ನಿತರೆ ಸಮಾರಂಭಗಳನ್ನು ನಡೆಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಹಾಗೂ ಕಾರ್ಯಾಚರಣೆ ಅಧಿಕಾರಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.