ಹೊಸಪೇಟೆ(ವಿಜಯನಗರ ಜಿಲ್ಲೆ),ಫೆ.15: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಕ್ರಮಬದ್ಧ ಕಾರ್ಯವಿಧಾನ ಮಾರ್ಗಸೂಚಿಗಳ ಕುರಿತು ವಿಜಯನಗರ ಜಿಲ್ಲೆಯ ಕ್ಷೇತ್ರಮಟ್ಟದ ಭಾಗೀದಾರರಿಗೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಜಿಪಂ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಅಪರ ಜಿಲ್ಲಾಧಿಕಾರಿ ಮಹೇಶ ಬಾಬು ಅವರು ಜಿಲ್ಲಾಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿದರು. ಮಹಿಳೆಯರು ಮತ್ತು ಮಕ್ಕಳು ಅನೈತಿಕ ಸಾಗಾಣಿಕೆ ಕಾರ್ಯಾಗಾರದ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸಿಂಧು ಅಂಗಡಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಮಾನವ ಕಳ್ಳ ಸಾಗಾಣಿಕೆ ರಾಜ್ಯ ಉನ್ನತ ಸಮಿತಿ ಸದಸ್ಯರು ವಿಲಿಯಂ ಕ್ರಿಸ್ಟೋಫರ್ ಅವರು ಮಾನವ ಕಳ್ಳ ಸಾಗಾಣಿಕೆ ಮತ್ತು ಜೀತಪದ್ಧತಿ ಕುರಿತು ವಿಷಯ ಮಂಡಿಸಿದರು. ಯುನಿಸೆಫ್ ರಾಘವೇಂದ್ರಭಟ್ ಅವರು ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ಕುರಿತು ಕ್ರಮಬದ್ಧ ಕಾರ್ಯವಿಧಾನ ಮಾರ್ಗಸೂಚಿ ಕುರಿತು ವಿಷಯ ಪ್ರಸ್ತಾಪ ಮಂಡಿಸಿದರು.
ಬಿಇಒ ಸುನಂದಮ್ಮ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆನಾಗಪ್ಪ ಸೇರಿದಂತೆ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಾಗಾಣಿಕೆ ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಅಧಿಕಾರಿ/ಸಿಬ್ಬಂದಿ ವರ್ಗದವರು ಹಾಜರಿದ್ದರು.
ಮೇಲ್ವಿಚಾರಕಿ ಲಕ್ಷೀದೇವಿ ಪ್ರಾರ್ಥಿಸಿದರು. ತಾಲೂಕು ಸಂಯೋಜಕ ನೀಲಕಂಠ ನಿರೂಪಿಸಿದರು.