ಕಬ್ಬು ಖರೀದಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಲಿ; ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ

ಕಾರವಾರ: ಸರ್ಕಾರದ ಆದೇಶದಂತೆ 2024-25 ನೇ ಸಾಲಿನ ಕಬ್ಬು ಅರೆಯುವ ಹಂಗಾಮು ನವೆಂಬರ್ 15 ರಿಂದ ಆರಂಭವಾಗಲಿದ್ದು, ಜಿಲ್ಲೆಯ ಕಬ್ಬು ಬೆಳಗಾರರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ, ಜಿಲ್ಲೆಯಲ್ಲಿ ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಕಬ್ಬು ಖರೀದಿ…

ಕಾರವಾರ: ಸರ್ಕಾರದ ಆದೇಶದಂತೆ 2024-25 ನೇ ಸಾಲಿನ ಕಬ್ಬು ಅರೆಯುವ ಹಂಗಾಮು ನವೆಂಬರ್ 15 ರಿಂದ ಆರಂಭವಾಗಲಿದ್ದು, ಜಿಲ್ಲೆಯ ಕಬ್ಬು ಬೆಳಗಾರರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ, ಜಿಲ್ಲೆಯಲ್ಲಿ ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಕಬ್ಬು ಖರೀದಿ ಪ್ರಕ್ರಿಯೆಯನ್ನು ನಡೆಸುವಂತೆ ಹಳಿಯಾಳದ ಇಐಡಿ ಪ್ಯಾರಿ ಕಂಪೆನಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.

ಜಿಲ್ಲೆಯ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ಕಬ್ಬು ಬೆಳೆಗಾರರೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 13,559.50 ಹೆಕ್ಟೇರ್ ನಲ್ಲಿ ಕಬ್ಬು ಬೆಳೆಯಲಾಗಿದ್ದು, ಕಬ್ಬು ಬೆಳಗಾರರಿಗೆ ಪ್ರತೀ ಮೆ. ಟನ್‌ಗೆ ಗರಿಷ್ಠ ದರ ನೀಡಿ ಕಬ್ಬು ಖರೀದಿಸುವಂತೆ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಕಬ್ಬು ಕಟಾವು, ಸಾಗಾಣಿಕೆ, ಖರೀದಿ, ತೂಕ ಸೇರಿದಂತೆ ಯಾವುದೇ ಪ್ರಕ್ರಿಯೆಗಳಲ್ಲಿ ಜಿಲ್ಲೆಯ ಕಬ್ಬು ಬೆಳಗಾರರಿಗೆ ವಂಚನೆಯಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಸಕ್ಕರೆ ಕಾರ್ಖಾನೆಯು ಕಬ್ಬಿನ ಉಪ ಉತ್ಪನ್ನಗಳಿಂದ ಪಡೆಯುವ ಲಾಭವನ್ನು ರೈತರಿಗೆ ಹಂಚಬೇಕು, ಕಬ್ಬು ಕಟಾವುಗೆ ನಿಗಧಿಪಡಿಸಿರುವ ಪ್ರದೇಶದ ವ್ಯಾಪ್ತಿಯ ಬಗ್ಗೆ ಪರಿಶೀಲಿಸಿ, ರೈತರಿಗೆ ಅನುಕೂಲವಾಗುವಂತೆ ವ್ಯಾಪ್ತಿ ಮಿತಿಯಲ್ಲಿ ಅಗತ್ಯ ಬದಲಾವಣೆ ಮಾಡಬೇಕು, ಕಬ್ಬು ಕಟಾವು ಮತ್ತು ಸಾಗಾಣಿಕಾ ವೆಚ್ಚವನ್ನು ಸರ್ಕಾರದ ಸುತ್ತೊಲೆ ಪ್ರಕಾರ ವಸೂಲಿ ಮಾಡಬೇಕು ಎಂದರು.

Vijayaprabha Mobile App free

ಕಬ್ಬು ಕಟಾವಿನ ವೇಳೆ ಆದ್ಯತಾ ಪಟ್ಟಿ ಸಿದ್ದಪಡಿಸಿ, ರೈತರಿಗೆ ನೀಡುವುದರ ಜೊತೆಗೆ. ನಿಗಧಿತ ಪಟ್ಟಿಯ ಪ್ರಕಾರವೇ ರೈತರ ಜಮಿನುಗಳಲ್ಲಿ ಕಬ್ಬು ಕಟಾವು ಮಾಡಬೇಕು. ಇದನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಪಟ್ಟವರ ವಿರುದ್ದ ಪೊಲೀಸ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಕಬ್ಬು ತೂಕ ಮಾಡುವ ಯಂತ್ರವನ್ನು ಕಾರ್ಖಾನೆ ಮುಂದೆ ಅಳಡಿಸುವಂತೆ ಮತ್ತು ತೂಕದ ವಿವರಗಳನ್ನು ರೈತರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು. ಖರೀದಿಯಲ್ಲಿ ಅನಗತ್ಯ ವಿಳಂಬ ಮಾಡದಂತೆ ಕಟ್ಟುನಿಟ್ಟಾಗಿ ಸೂಚಿಸಿದರು.

ಕಬ್ಬು ಕಾರ್ಖಾನೆ ತಲುಪಿದ ನಂತರ ತಕ್ಷಣ ತೂಕ ಮಾಡಿ ರೈತರಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿ ತಲುಪಿಸುವುದರ ಜೊತೆಗೆ ಖರೀದಿಸಿದ ಬಿಲ್‌ ನೀಡುವಂತೆ ಸೂಚಿಸಿದರು. ಕಾರ್ಖಾನೆ ಆರಂಭದ ಪೂರ್ವದಲ್ಲಿ ಜಿಲ್ಲಾಡಳಿತ ಮತ್ತು ರೈತರಿಗೆ ತಿಳಿಸಬೇಕು. ಕಬ್ಬು ಕಟಾವಿಗೆ ರೈತರಿಂದ ಯಾವುದೇ ಶುಲ್ಕ ವಸೂಲಿ ಮಾಡದಂತೆ ಸೂಚನೆ ನೀಡಿದರು.

ಕಬ್ಬು ಬೆಳೆಗಾರರು, ಅಧಿಕಾರಿಗಳು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಈ ಸಮಿತಿ ಮೂಲಕವೇ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಗತ್ಯ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕುಮಾರ್ ಕಾಂದೂ, ಎಸಿ ಕನಿಷ್ಕ, ಎಡಿಸಿ ಸಾಜಿದ್ ಅಹ್ಮದ್ ಮುಲ್ಲಾ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್, ವಿವಿಧ ಇಲಾಖೆಯ ಅಧಿಕಾರಿಗಳು, ಕಬ್ಬು ಬೆಳಗಾರರ ಸಂಘದ ಪದಾಧಿಕಾರಿಗಳು, ಇಐಡಿ ಪ್ಯಾರಿ ಕಂಪೆನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.