ದಾವಣಗೆರೆ: ಮಹಾ ನಗರ ಪಾಲಿಕೆ ಮೇಯರ್ , ಉಪ ಮೇಯರ್ ಸ್ಥಾನಗಳಿಗೆ ಇಂದು (ಮಾ. 4) ಚುನಾವಣೆ ನಡೆಯಲಿದ್ದು, ಪರಿಶಿಷ್ಠ ಪಂಗಡಕ್ಕೆ ಮೇಯರ್ ಸ್ಥಾನ ಮೀಸಲಾತಿ ಬಂದಿದ್ದು, ಬಿಜೆಪಿಯಲ್ಲಿ ಈ ಮೀಸಲಾತಿ ಸದಸ್ಯರು ಯಾರು ಇಲ್ಲ. ಈ ಬಾರಿ ಬಿಜೆಪಿಗೆ ಬಹುಮತವಿದ್ದರೂ ಅಧಿಕಾರದಿಂದ ದೂರ ಉಳಿಯುವ ಸ್ಥಿತಿ ಉಂಟಾಗಿದ್ದು, ಕೊನೆ ಕ್ಷಣದಲ್ಲಿ ಮ್ಯಾಜಿಕ್ ಆದರೂ ಅಚ್ಚರಿ ಪಡಬೇಕಿಲ್ಲ.
ಹೌದು, ಪರಿಶಿಷ್ಟ ಪಂಗಡಕ್ಕೆ ಮೇಯರ್ ಹಾಗೂ ಸಾಮಾನ್ಯ ಮಹಿಳೆಗೆ ಉಪ ಮೇಯರ್ ಸ್ಥಾನ ಮೀಸಲಾಗಿದ್ದು, ಇಂದು ಮಧ್ಯಾಹ್ನ 12ರಿಂದ 1 ರೊಳಗಾಗಿ ನಾಮಪತ್ರ ಸ್ವೀಕರಿಸಲಾಗುವುದು, ಮಧ್ಯಾಹ್ನ 3ರಿಂದ ಸಭೆ ಆರಂಭವಾಗಲಿದ್ದು, ಸದಸ್ಯರ ಹಾಜರಾತಿ ಪಡೆದು ಚುನಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಪಾಲಿಕೆ ಚುನಾವಣೆ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಯಾನ್ ಆದಿತ್ಯ ಬಿಸ್ವಾಸ್ ಮಾಹಿತಿ ನೀಡಿದ್ದಾರೆ.
ದಾವಣಗೆರೆ ಮಹಾ ನಗರ ಪಾಲಿಕೆಯ 45 ಸದಸ್ಯರಲ್ಲಿ ಬಿಜೆಪಿ 24 ( ನಾಲ್ಕು ಪಕ್ಷೇತರರು ಸೇರಿ) ಕಾಂಗ್ರೆಸ್ 20, ಜೆಡಿಎಸ್ 1 ಸ್ಥಾನ ಹೊಂದಿದೆ. ಇದರಲ್ಲಿ ಬಿಜೆಪಿಯಲ್ಲಿ ಪರಿಶಿಷ್ಟ ಪಂಗಡದ ಸದಸ್ಯರಿಲ್ಲ. ಹೀಗಾಗಿ ಮೇಯರ್ ಪಟ್ಟವು ಕಾಂಗ್ರೆಸ್ ಪಕ್ಷದ ಐವರು ಪರಿಶಿಷ್ಟ ಪಂಗಡದ ಸದಸ್ಯರಲ್ಲಿ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು, ಆಡಳಿತ ಪಕ್ಷ ಬಿಜೆಪಿ ಕೊನೆ ಕ್ಷಣದಲ್ಲಿ ತಂತ್ರಗಾರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ ಹೇಳಲಾಗಿದೆ.