ದಾವಣಗೆರೆ: ನಗರದಲ್ಲಿ ಉದ್ಯಮಿ ಗೌತಮ್ ಅದಾನಿ ಸಮೂಹ ಸಂಸ್ಥೆ ಅದಾನಿ ಗ್ರೂಪ್ಸ್ ವಿರುದ್ಧದ ಆಪಾದನೆಗಳ ಬಗ್ಗೆ ಸುಪ್ರೀಂಕೋರ್ಟ್ ಅಥವಾ ಜಂಟಿ ಸಂಸದೀಯ ಸಮಿತಿ ನೇತೃತ್ವದಲ್ಲಿ ಉನ್ನತ ತನಿಖೆ ನಡೆಸಲು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ಮಂಗಳವಾರ ಪ್ರತಿಭಟನೆ ನಡೆಸಿತು.
ಹೌದು, ಅದಾನಿ ಗ್ರೂಪ್ಸ್ ವಿರುದ್ಧ ಉನ್ನತ ತನಿಖೆ ನಡೆಸಲು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಚೇರಿಯಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ತೆರಳಿ, ಅಲ್ಲಿನ ಅಧಿಕಾರಿಗಳ ಮೂಲಕ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಈಗಾಗಲೇ ಕೋಟ್ಯಂತರ ಭಾರತೀಯರು ಜೀವವಿಮೆ ನಿಗಮದಲ್ಲಿ ಕೂಡಿಟ್ಟ ಹಣವನ್ನು ಅದಾನಿ ಸಮೂಹ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರ ಹೂಡಿಕೆ ಮಾಡಿದ್ದು, ಎಸ್‌ಬಿಐ ಇತರೆ ಬ್ಯಾಂಕ್‌ಗಳು ಅದಾನಿಗೆ ಭಾರಿ ಮೊತ್ತದ ಸಾಲ ನೀಡಿದ್ದು, ಅದಾನಿ ವಿರುದ್ಧದ ಆರೋಪದಿಂದಾಗಿ ತೀವ್ರ ಆತಂಕ ಸೃಷ್ಟಿಯಾಗಿದೆ ಎಂದು ಹೇಳಿದರು.
ಇನ್ನು, ಕೇಂದ್ರದ ಬಜೆಟ್‌ನಲ್ಲಿ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಸುರಕ್ಷ, ಉದ್ಯೋಗ ವೇತನ, ಉದ್ಯೋಗ ಖಾತ್ರಿಯಂತಹ ಯೋಜನೆಗಳಿಗೆ ಹೆಚ್ಚು ಅನುದಾನ ನೀಡಿಲ್ಲ. ಪೆಟ್ರೋಲ್, ಡೀಸೆಲ್, ರಸಗೊಬ್ಬರ ಬೆಲೆ ಇಳಿಕೆ ಪ್ರಸ್ತಾಪ ಮಾಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲ, ಬಜೆಟ್‌ನಲ್ಲಿ ನಿರುದ್ಯೋಗ, ಬಡತನ, ಬೆಲೆಏರಿಕೆ ತಡೆಗಟ್ಟುವ ಯಾವುದೇ ಯೋಜನೆಗಳಿಲ್ಲ. ಕಾರ್ಪೋರೇಟ್-ಬಂಡವಾಳಶಾಹಿಗಳ ಹಿತವನ್ನೇ ಆದ್ಯತೆಯಾಗಿಸಿಕೊಂಡ ಸರ್ಕಾರ, ಶಿಕ್ಷಣ-ಆರೋಗ್ಯ ಕ್ಷೇತ್ರದ ಖಾಸಗೀಕರಣಕ್ಕೆ ಮುಂದಾಗಿದ್ದು, ಇವುಗಳ ಅನುದಾನ ಕಡಿತಗೊಳಿಸಿದ್ದು, ಐಸಿಎಂಆರ್ ಲ್ಯಾಬ್, ನರ್ಸಿಂಗ್ ಕಾಲೇಜುಗಳನ್ನು ಖಾಸಗಿಗೆ ವಹಿಸಲು ನಿರ್ಧರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹ ಕಾರ್ಯದರ್ಶಿ ಎಚ್.ಜಿ.ಉಮೇಶ್, ಬಸವರಾಜಪ್ಪ, ಟಿ.ಎಸ್.ನಾಗರಾಜ, ಸರೋಜಾ, ಎಸ್.ಎಸ್.ಮಲ್ಲಮ್ಮ, ಆವರಗೆರೆ ವಾಸು, ಆನಂದರಾಜ್, ಕೆ.ಎಚ್.ಹನುಮಂತಪ್ಪ, ಸುರೇಶ್ ಯರಗುಂಟೆ, ಎಚ್.ಪಿ.ಉಮಾಪತಿ, ಟಿ.ಎಚ್.ನಾಗರಾಜಪ್ಪ ಅವರು ಇತರರಿದ್ದರು.