ಕಾರವಾರ: ಉಪಚುನಾವಣೆ ಹಿನ್ನಲೆ ಸಂಡೂರಿನಲ್ಲಿ ಬಿಜೆಪಿ ಪಕ್ಷದ ಪರ ಮುಖಂಡರು ಬಿರುಸಿನ ಪ್ರಚಾರ ಕೈಗೊಂಡಿದ್ದು, ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಸಹ ಪಕ್ಷದ ನೇತಾರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ರೋಡ್ ಶೋದಲ್ಲಿ ಪಾಲ್ಗೊಂಡು ಗ್ರಾಮೀಣ ಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಸಂಡೂರಿನ ಎಚ್ ಕೆ ಹಳ್ಳಿಯಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು ಅವರ ಪರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ರೋಡ್ ಶೋದಲ್ಲಿ ರೂಪಾಲಿ ಎಸ್.ನಾಯ್ಕ ಪಾಲ್ಗೊಂಡರು. ಪ್ರಮುಖರಾದ ಜನಾರ್ಧನ ರೆಡ್ಡಿ, ಅಭ್ಯರ್ಥಿ ಬಂಗಾರು ಹನುಮಂತು ಮತ್ತಿತರರು ಇದ್ದರು. ಇದಕ್ಕೂ ಮುನ್ನ ಸಂಡೂರಿನಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ಬಗ್ಗೆ ರೂಪಾಲಿ ಎಸ್.ನಾಯ್ಕ ಚರ್ಚೆ ನಡೆಸಿದರು. ಮಾಧ್ಯಮ ಗೋಷ್ಠಿಯಲ್ಲೂ ಪಾಲ್ಗೊಂಡು ಚುನಾವಣಾ ಪ್ರಚಾರದ ಬಗ್ಗೆ ಮಾಹಿತಿ ನೀಡಿದರು.
ಸಂಡೂರಿನ ಗ್ರಾಮೀಣ ಭಾಗವಾದ ಯಶವಂತ ನಗರ, ಮತ್ತಿತರ ಕಡೆ ರೂಪಾಲಿ ಎಸ್.ನಾಯ್ಕ ಮಹಿಳಾ ತಂಡದ ನೇತೃತ್ವವಹಿಸಿ ಅಬ್ಬರದ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಗ್ಗದ ಆಮಿಷಗಳನ್ನು ಒಡ್ಡಿ ಅಧಿಕಾರಕ್ಕೇರಿದೆ. ಅಧಿಕಾರಕ್ಕೆ ಬರುತ್ತಿದ್ದಂತೆ ಅಭಿವೃದ್ಧಿ, ಜನಸೇವೆಗೆ ಮೀಸಲಾದ ಹಣವನ್ನು ಕೊಳ್ಳೆ ಹೊಡೆಯುತ್ತಿದೆ. ಭ್ರಷ್ಟಾಚಾರ ಮಿತಿಮೀರಿದೆ. ಆಡಳಿತ ಯಂತ್ರ ಕುಸಿದು ಬಿದ್ದಿದೆ. ಅಭಿವೃದ್ಧಿ ಶೂನ್ಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಅಭಿವೃದ್ಧಿ, ಜನ ಕಲ್ಯಾಣ, ಸಂಡೂರಿನ ಪ್ರಗತಿಗೆ ಬಿಜೆಪಿ ಬದ್ಧವಾಗಿದೆ. ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿರುವ ಕಾಂಗ್ರೆಸ್ ಅನ್ನು ಈ ಚುನಾವಣೆಯಲ್ಲಿ ತಿರಸ್ಕರಿಸಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕೆಂದು ಮತದಾರರಲ್ಲಿ ರೂಪಾಲಿ ಎಸ್.ನಾಯ್ಕ ಮನವಿ ಮಾಡಿದರು.
ಮಹಿಳಾ ಮೋರ್ಚಾ ಅಧ್ಯಕ್ಷೆ ದೀಪಾ ಘೋಡ್ಕೆ, ಗ್ರಾಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಬಿ.ಜಿ.ಮಂಜುಳಾ, ಮಹಿಳಾ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.