ದಾವಣಗೆರೆ, ಜುಲೈ 29: ರಾಸಾಯನಿಕ ದುರಂತಗಳು ಸಂಭವಿಸಿದಾಗ ಇದರ ತಡೆಯ ಬಗ್ಗೆ ಅರಿವಿದ್ದಲ್ಲಿ ಹೆಚ್ಚಿನ ಅನಾಹುತ ತಪ್ಪಿಸಬಹುದಾಗಿದೆ ಎಂದು ದಾವಣಗೆರೆ ಉಪವಿಭಾಗಾಧಿಕಾರಿ ದುರ್ಗಶ್ರೀ ತಿಳಿಸಿದರು.
ಅವರು ಜುಲೈ 29 ರಂದು ಜಗಳೂರು ತಾಲ್ಲೂಕಿನ ಸಂತೇಮುದ್ದಾಪುರದ ಬಳಿಯ ಗೇಲ್ ಕಂಪನಿಯ ಅವರಣದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಏರ್ಪಡಿಸಲಾದ ರಾಸಾಯನಿಕ ವಿಪತ್ತು ನಿರ್ವಹಣೆ ಕುರಿತ ಅಣಕು ಪ್ರದರ್ಶನದಲ್ಲಿ ವೀಕ್ಷಕರಾಗಿ ಭಾಗವಹಿಸಿ ಮಾತನಾಡಿದರು.
ರಾಸಾಯನಿಕ ದುರಂತದಿಂದ ಸಾಕಷ್ಟು ನಷ್ಟ ಉಂಟಾಗುತ್ತದೆ. ಇಂತಹ ವಿಪತ್ತು ಸಂಭವಿಸಿದಾಗ ಯಾವ ರೀತಿ ಇದನ್ನು ತಡೆಗಟ್ಟಬಹುದೆಂದು ಎಲ್ಲರೂ ತಿಳಿದಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಗೇಲ್ ಇಂಡಿಯಾ ಕಂಪನಿಯವರು ಅನೇಕ ಅಣುಕು ಪ್ರದರ್ಶನದ ಮೂಲಕ ತಿಳಿಸಿದ್ದಾರೆ. ಅನಿಲ ದುರಂತದ ವೇಳೆ ಬ್ರಾಸ್ ಸಲಕರಣೆಯನ್ನು ಬಳಸಬೇಕು. ಲೋಹದ ಸಲಕರಣೆಗಳನ್ನು ಬಳಸಿದಲ್ಲಿ ಸ್ಪಾರ್ಕ್ ಬರುತ್ತದೆ, ಇಂತಹ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದರು.
ಈ ವೇಳೆ ಗೇಲ್ ಕಂಪನಿಯ ಜನರಲ್ ಮ್ಯಾನೇಜರ್ ಎನ್.ಎನ್.ತೋಪನ್ನವರ್ ಮಾತನಾಡಿ, ಗೇಲ್ ಇಂಡಿಯಾ ಲಿಮಿಟೆಡ್ ಕಂಪನಿಯು ಕೇಂದ್ರ ಸರ್ಕಾರದ ಕಂಪನಿಯಾಗಿದ್ದು, ನೈಸರ್ಗಿಕ ಕೊಳವೆ ಮಾರ್ಗವನ್ನು ಅಳವಡಿಸಿದೆ. ಎಲ್ಲರೂ ಮುನ್ನೆಚ್ಚರಿಕೆಯಿಂದ ಅನಿಲ ಕೊಳವೆ ಮಾರ್ಗವನ್ನು ರಕ್ಷಿಸುವುದು ಅತ್ಯಂತ ಮಹತ್ವವಾಗಿದೆ. ಇದು ವಿಷಾನಿಲವಲ್ಲ, ಅತ್ಯಧಿಕ ಉರಿಯುವ ಅನಿಲವಾಗಿದೆ. ಸೋರಿಕೆ ಸಮಯದಲ್ಲಿ ಬೆಂಕಿಯನ್ನು ಆಕರ್ಷಿಸುತ್ತದೆ. ಅದಕ್ಕಾಗಿ ಕೊಳವೆ ಮಾರ್ಗದಲ್ಲಿ ಯಾವುದೇ ತರಹದ ನಿರ್ಮಾಣ ಕಾಮಗಾರಿ, ಗಿಡೆನೆಡುವ ಕೆಲಸ ಮಾಡಬಾರದು. ಈ ಮಾರ್ಗವನ್ನು ತಿಳಿದು, ತಿಳಿಯದೇ ಹಾಳು ಮಾಡುವುದು ಸಹ ಅಪರಾಧವಾಗುತ್ತದೆ. ಈ ಮಾರ್ಗವು 30 ಮೀಟರ್ ವ್ಯಾಪ್ತಿ ಹೊಂದಿದ್ದು, ಕಂಪನಿಗೆ ತಿಳಿಯದೇ ಯಾವುದೇ ಕಾಮಗಾರಿಯನ್ನು ಕೈಗೊಳ್ಳುವಂತಿಲ್ಲ ಎಂದರು.
ಅನಿಲ ಸೋರಿಕೆ ಸಮಯದಲ್ಲಿ ಬೀಡಿ, ಸಿಗರೇಟ್, ಸ್ಟವ್ ಒಲೆ ಇತ್ಯಾದಿಗಳನ್ನು ಸೋರುವಿಕೆ ಸ್ಥಳದಿಂದ ದೂರವಿರಬೇಕು. ಗಾಳಿಯ ವಿರುದ್ಧ ದಿಕ್ಕನತ್ತ ಓಡಬೇಕು. ಹತ್ತಿರದ ನಿವಾಸಿಗಳಿಗೆ ತಿಳಿಸುತ್ತಾ ಅನಿಲ ಪ್ರಭಾವಿತ ವ್ಯಕ್ತಿಯನ್ನು ಶುದ್ಧ ಗಾಳಿಯಿರುವ ಕಡೆ ಕರೆದುಕೊಂಡು ಹೋಗಿ ಕಣ್ಣುಗಳನ್ನು ನೀರಿನಿಂದ ತೊಳೆಯಬೇಕು ಹಾಗೂ ವೈದ್ಯರ ಸಲಹೆ ಪಡೆಯಬೇಕು. ತುರ್ತು ಸಂದರ್ಭದಲ್ಲಿ 1800118430, 15101 ಗೆ ಕರೆ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್, ಹೊನ್ನಾಳಿ ಉಪವಿಭಾಗಾಧಿಕಾರಿ ಹುಲಿಮನಿ ತಿಮ್ಮಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಾರಾಜ್, ಪರಿಸರ ಅಧಿಕಾರಿ ಎಂ.ಎಸ್.ಮಹೇಶ್ವರಪ್ಪ, ಹೆಚ್ಚುವರಿ ರಕ್ಷಣಾಧಿಕಾರಿ ಬಸರಗಿ, ಜಗಳೂರು ತಹಶೀಲ್ದಾರ್ ಸಂತೋಷ್, ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಾಲೋಚಕ ಜಯಣ್ಣ ಉಪಸ್ಥಿತರಿದ್ದರು.