ದಾವಣಗೆರೆ ಸೆ.21: 2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ಜಿಲ್ಲೆಯ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಗೆ ಒಟ್ಟು ಭೌತಿಕ 59 ಗುರಿಯನ್ನು ನಿಗದಿಪಡಿಸಲಾಗಿದ್ದು, ಈ ಯೋಜನೆಯಡಿ ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕುಗಳ ಸಹಯೋಗದೊಂದಿಗೆ ಅರ್ಹ ಮಹಿಳೆಯರಿಗೆ ಸಾಲದ ವ್ಯವಸ್ಥೆ ಹಾಗೂ ನಿಗಮದಿಂದ ಸಹಾಯಧನವನ್ನು ನೀಡಲಾಗುವುದು.
ಅರ್ಹತೆಗಳು: 18 ರಿಂದ 55 ವರ್ಷದ ಮಹಿಳೆಯರಿಗೆ ಅವಕಾಶವಿರುತ್ತದೆ. ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷ ಮೀರಿರಬಾರದು. ಇತರೆ ವರ್ಗದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 1.50 ಲಕ್ಷ ಮೀರಿರಬಾರದು.
ದಾಖಲಾತಿಗಳು: ನಿಗದಿತ ಅರ್ಜಿ ನಮೂನೆ (ತ್ರಿಪ್ರತಿ), ಜಾತಿ ಪ್ರಮಾಣ ಪತ್ರ ಮತ್ತು ಕುಟುಂಬದ ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ ಪತ್ರ, ಫಲಾನುಭವಿಯ ಆಧಾರ್ ಕಾರ್ಡ್ ಪ್ರತಿ, ಕೈಗೊಳ್ಳುವ ಚಟುವಟಿಕೆಯ ಯೋಜನಾ ವರದಿ, ತರಬೇತಿ ಅಥವಾ ಅನುಭವದ ಪತ್ರ ಹಾಗೂ ಮತದಾನದ ಗುರುತಿನ ಚೀಟಿ ಲಗತ್ತಿಸಬೇಕು.
ನಿಗದಿತ ದಾಖಲಾತಿಗಳೊಂದಿಗೆ ಪಡೆದ ಅರ್ಜಿಯನ್ನು ಪ್ರಾಥಮಿಕ ಪರಿಶೀಲನೆ ಮಾಡಲಾಗುವುದು. ಅರ್ಹ ಅರ್ಜಿಗಳನ್ನು ಆಯ್ಕೆ ಸಮಿತಿಯಲ್ಲಿ ಪರಿಶೀಲಿಸಿ, ಆಯ್ಕೆಯಾದ ಅರ್ಜಿಗಳನ್ನು ಅರ್ಜಿದಾರರ ಸೇವಾ ವಲಯದಲ್ಲಿ ಬರುವ ಬ್ಯಾಂಕಿನ ಶಾಖೆಗಳಿಗೆ ಸಾಲ ಮಂಜೂರಾತಿಗಾಗಿ ಶಿಫಾರಸ್ಸು ಮಾಡಲಾಗುವುದು. ಬ್ಯಾಂಕಿನಿಂದ ಸಾಲ ನೀಡಲು ಒಪ್ಪಿದಲ್ಲಿ ಇಡಿಪಿ ತರಬೇತಿ ಏರ್ಪಡಿಸಿ ಸಹಾಯಧನ ಬಿಡುಗಡೆ ಮಾಡಲಾಗುವುದು.
ಅರ್ಜಿ ಸಲ್ಲಿಸುವವರು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಎಲ್ಲಾ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 7 ರೊಳಗಾಗಿ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದಾವಣಗೆರೆ- 08192 263219, ಹರಿಹರ- 08192 241431, ಹೊನ್ನಾಳಿ- 08188 251283, ಜಗಳೂರು- 08196 227132, ಚನ್ನಗಿರಿ- 08189 228010 ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ತಿಳಿಸಿದ್ದಾರೆ.