ದಾವಣಗೆರೆ ಫೆ. 18 :ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ 2021-22ನೇ ಸಾಲಿನ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ವೈಯಕ್ತಿಕ ಕೊಳವೆ ಬಾವಿ ಸೌಲಭ್ಯ ಪಡೆಯಲು ಬೆಸ್ತ, ಅಂಬಿಗ/ಅಂಬಿ, ಗಂಗಾಮತ, ಕಬ್ಬಲಿಗ, ಕೋಲಿ, ಮೊಗವೀರ ಮತ್ತು ಇದರ ಉಪಜಾತಿಗಳಿಗೆ ಒಳಪಡುವ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿದ್ದು, ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿಲ್ಲದೆ ಇರುವ ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದು, ವಾರ್ಷಿಕ ವರಮಾನ 98000 ರೂ.ಗಳ ಮಿತಿಯಲ್ಲಿರಬೇಕು, ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 55 ವರ್ಷಗಳ ಮಿತಿಯೊಳಗಿರಬೇಕು. ವೈಯಕ್ತಿಕ ನೀರಾವರಿ ಕೊಳವೆ ಬಾವಿಗಳಿಗೆ ಘಟಕ ವೆಚ್ಚ ರೂ.2.25 ಲಕ್ಷ ಸಹಾಯ ಧನ ನಿಗದಿಪಡಿಸಿದೆ.
ಯೋಜನೆ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಚಾಲ್ತಿಯಲ್ಲಿರಬೇಕು, ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಮತ್ತು ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಕ್ಕೆ ಅನುಗುಣವಾಗಿ ಸೌಲಭ್ಯ ಒದಗಿಸಲಾಗುವುದು.
ಅರ್ಜಿಯನ್ನು ಮಾ.10 ರ ಸಂಜೆ 05.30 ರೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರಿಗೆ ಸಲ್ಲಿಸಬಹುದಾಗಿದೆ. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‍ಸೈಟ್ https://ambigaradevelopment.karnataka.gov.in ನಲ್ಲಿ ವಿವರ ಪಡೆಯಬಹುದು ಅಥವಾ ಜಿಲ್ಲಾ ವ್ಯವಸ್ಥಾಪಕರು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ (ನಿ). ಕೇರಾ ಆಫ್ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ದಾವಣಗೆರೆ ರವರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.