ಜಿಲ್ಲೆಯಲ್ಲಿ 2874 ಕೊವಿಡ್ ಪ್ರಕರಣ ಸಕ್ರಿಯ, 10733 ಜನ ಗುಣಮುಖ : ಮಹಾಂತೇಶ್ ಬೀಳಗಿ

ದಾವಣಗೆರೆ ಸೆ.19: ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುವ ಕೋವಿಡ್ ರೋಗಿಗಳಿಗೆ ಸರ್ಕಾರದ ಎಬಿಎಆರ್‍ಕೆ ಯೋಜನೆಯಡಿ ವೈದ್ಯಕಿಯ ವೆಚ್ಚ ಭರಿಸಲಾಗುವುದು. ಜಿಲ್ಲೆಯಲ್ಲಿ ಸದ್ಯ 2874 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಈವರೆಗೆ 10733 ಜನ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇದುವರೆಗೆ 13834 ಕೋವಿಡ್ ಪಾಸಿಟೀವ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 10733 ಜನ ಗುಣಮುಖರಾಗಿದ್ದಾರೆ. ಒಟ್ಟು 227 ಜನ ಮೃತಪಟ್ಟಿದ್ದು, ಸದ್ಯ ಜಿಲ್ಲೆಯಲ್ಲಿ 2874 ಸಕ್ರಿಯ ಕೋವಿಡ್ ಪ್ರಕರಣಗಳು ಇವೆ. ಇದರಲ್ಲಿ 1679 ಜನ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ, ಉಳಿದವರು ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತಮ ಪ್ರತ್ಯೇಕ ವ್ಯವಸ್ಥೆ ಇರುವವರಿಗೆ ಮಾತ್ರ ಮನೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗುತ್ತಿದೆ. ಆದರೆ ಆದಷ್ಟೂ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್‍ಗಳಲ್ಲಿಯೇ ದಾಖಲಾಗುವಂತೆ ಶಿಫಾರಸು ಮಾಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 37 ಜನ ಐಸಿಯು ನಲ್ಲಿ ಹಾಗೂ 16 ಜನ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ ಸದ್ಯ 03 ಪ್ರಯೋಗಾಲಯಗಳಲ್ಲಿ ಕೋವಿಡ್ ಪತ್ತೆ ನಡೆಸಲಾಗುತ್ತಿದ್ದು, ದಿನಕ್ಕೆ ಸುಮಾರು 800 ಮಾದರಿಗಳ ಪರೀಕ್ಷೆ ಮಾಡುತ್ತಿದ್ದೇವೆ. ಬರುವ ದಿನಗಳಲ್ಲಿ ದಿನಕ್ಕೆ ಕನಿಷ್ಟ 2500 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಚನ್ನಗಿರಿ ಶಾಸಕರು ಹಾಗೂ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ನಿಗಮದ ಅಧ್ಯಕ್ಷ ಮಾಡಾಳು ವಿರುಪಾಕ್ಷಪ್ಪ ಅವರು ಮಾತನಾಡಿ, ರೈತರು, ಬಡವರು ಕೋವಿಡ್ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದಲ್ಲಿ ಅವರಿಗೆ ವೈದ್ಯಕೀಯ ವೆಚ್ಚ ಭರಿಸಲು ತೊಂದರೆಯಾಗುತ್ತಿದೆ.

ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸೂಕ್ತ ಮಾಹಿತಿ ಹಾಗೂ ಚಿಕಿತ್ಸೆ ದೊರಕಿಸಲು ಸಮರ್ಪಕ ವ್ಯವಸ್ಥೆ ಕೈಗೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕೋವಿಡ್‍ಗೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡುವ ರೋಗಿಗಳಿಗೆ ಮಾತ್ರ ಎಬಿಎಆರ್‍ಕೆ ಯೋಜನೆಯಡಿ ವೈದ್ಯಕೀಯ ವೆಚ್ಚ ಭರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಹಿತಿ ಫಲಕ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಬೇಗ ಪರೀಕ್ಷಿಸಿಕೊಳ್ಳಿ : ಕೋವಿಡ್ ರೋಗ ಲಕ್ಷಣಗಳು ಕಂಡುಬಂದರೂ ಕೆಲವರು ಭಯದಿಂದ ಅಥವಾ ನಿರ್ಲಕ್ಷ್ಯದಿಂದ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ರೋಗ ತೀವ್ರ ಗಂಭಿರತೆಯನ್ನು ಪಡೆದುಕೊಂಡಾಗ ಪರೀಕ್ಷೆಗೆ ಬರುತ್ತಾರೆ. ಹೀಗಾದಾಗ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟಕರವಾಗಲಿದೆ. ಕೋವಿಡ್ ಕಾರಣದಿಂದ ಮೃತಪಟ್ಟ ಬಹಳಷ್ಟು ಪ್ರಕರಣಗಳಲ್ಲಿ ಈ ರೀತಿಯಾಗಿರುವುದು ಕಂಡುಬಂದಿದೆ. ಹೀಗಾಗಿ ಸಾರ್ವಜನಿಕರು ಜ್ವರ, ನೆಗಡಿ, ಕೆಮ್ಮು ಮುಂತಾದ ರೋಗಲಕ್ಷಣಗಳು ಕಂಡುಬಂದ ಕೂಡಲೆ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬೇಗ ರೋಗ ಪತ್ತೆಯಾದಲ್ಲಿ ಬೇಗ ಗುಣಮುಖರಾಗಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಕೋವಿಡ್ ಮುಕ್ತಗೊಳಿಸಿ : ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು, ವೈದ್ಯರು ಕೋವಿಡ್ ನಿರ್ವಹಣೆಯನ್ನು ಉತ್ತಮವಾಗಿ ಮಾಡುತ್ತಿದ್ದಾರೆ. ಆದರೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಕೋವಿಡ್ ನಿರ್ವಹಣೆ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಜನರಲ್ಲಿ ಭಯ ನಿವಾರಿಸಿ, ಹೆಚ್ಚಿನ ಜಾಗೃತಿ ಮೂಡಿಸಬೇಕು. ಒಟ್ಟಾರೆ ಜಿಲ್ಲೆಯನ್ನು ಆದಷ್ಟು ಶೀಘ್ರ ಕೊರೋನಾ ಮುಕ್ತವನ್ನಾಗಿಸಲು ಶ್ರಮಿಸಬೇಕು ಎಂದರು.

ಆಹಾರ ಏಕರೂಪವಾಗಿರಲಿ: ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು ಮಾತನಾಡಿ, ಆಸ್ಪತ್ರೆ, ಹಾಸ್ಟೆಲ್, ಅಥವಾ ಕೋವಿಡ್ ಹೆಲ್ತ್ ಕೇರ್ ಸೆಂಟರ್‍ಗಳಲ್ಲಿ ಕೋವಿಡ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಊಟ, ಉಪಹಾರ ಕಲ್ಪಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಈ ವ್ಯವಸ್ಥೆ ಚೆನ್ನಾಗಿದೆ, ಆದರೆ ತಾಲ್ಲೂಕು ಮಟ್ಟದಲ್ಲಿ ಬೇರೆ ಬೇರೆ ರೀತಿಯಾಗಿದೆ. ಹೀಗಾಗಿ ಜಿಲ್ಲಾ ಮಟ್ಟದಲ್ಲಿ ಕೋವಿಡ್ ರೋಗಿಗಳಿಗೆ ನೀಡಲಾಗುವ ಊಟ, ಉಪಹಾರದ ಮೆನು ಸಿದ್ಧಪಡಿಸಿ, ಜಿಲ್ಲೆಯಾದ್ಯಂತ ಇದೇ ವ್ಯವಸ್ಥೆ ಜಾರಿಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಸಮ್ಮತಿಸಿ, ಕೂಡಲೆ ಈ ವ್ಯವಸ್ಥೆ ಮಾಡಲಾಗುವುದು ಎಂದರು.

ಹರಿಹರ ಶಾಸಕ ರಾಮಪ್ಪ ಅವರು ಮಾತನಾಡಿ, 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ, ಕೆಲವರು ಇದಕ್ಕೆ ಆಕ್ಷೇಪಿಸುತ್ತಿದ್ದಾರೆ ಎಂದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಈಗಾಗಲೆ ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟವರು, ರಕ್ತದೊತ್ತಡ, ಮಧುಮೇಹ, ಅಸ್ತಮ ಇರುವವರ ಸಮೀಕ್ಷೆ ನಡೆಸಿ, ದತ್ತಾಂಶ ದಾಖಲಿಸಲಾಗಿದ್ದು, ಇದರನ್ವಯ ಅಂತಹವರೆಲ್ಲರಿಗೂ ಆದ್ಯತೆ ಮೇರೆಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಈ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಮನವೊಲಿಸಬೇಕು ಎಂದು ಮನವಿ ಮಾಡಿದರು.

ಆರೋಗ್ಯ ಇಲಾಖೆಯ ಡಾ. ಗಂಗಾಧರ್ ಅವರು ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಮಾಹಿತಿ ನೀಡಿ, ಜಿಲ್ಲೆಯಲ್ಲಿ ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 7292 ಪಾಸಿಟೀವ್ ಪ್ರಕರಣಗಳು ದಾಖಲಾಗಿದ್ದರೆ, ಉಳಿದಂತೆ ಹರಿಹರ-2016, ಹೊನ್ನಾಳಿ-1721, ಜಗಳೂರು-688, ಚನ್ನಗಿರಿ-1650, ಇತರೆ ಜಿಲ್ಲೆಯವರು-467 ಸೇರಿದಂತೆ ಒಟ್ಟು 13834 ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ. ಸದ್ಯ ದಾವಣಗೆರೆ-866, ಹರಿಹರ-561, ಹೊನ್ನಾಳಿ-541, ಜಗಳೂರು-229, ಚನ್ನಗಿರಿ-590, ಇತರೆ ಜಿಲ್ಲೆ-87 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಒಟ್ಟು ಜಿಲ್ಲೆಯಲ್ಲಿ 1.13 ಲಕ್ಷ ಟೆಸ್ಟ್ ಮಾಡಲಾಗಿದ್ದು, 43 ಸಾವಿರ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಜಗಳೂರು ಶಾಸಕ ಎಸ್.ಪಿ. ರಾಮಚಂದ್ರಪ್ಪ, ಹರಿಹರ ಶಾಸಕ ರಾಮಪ್ಪ, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಘವೇಂದ್ರಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement