Cyclone Monta । ಮೋ೦ಟಾ ಚ೦ಡಮಾರುತದ ಪರಿಣಾಮವಾಗಿ ಕರ್ನಾಟಕದಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ಉತ್ತರ ಒಳನಾಡು ಭಾಗದಲ್ಲಿ ಭಾರಿ ಮಳೆಯ ಸಾಧ್ಯತೆ ಇದ್ದು, ದಕ್ಷಿಣ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಬಹುದಾದರೂ ಮಳೆಯ ಪ್ರಮಾಣ ಕಡಿಮೆ ಇರಲಿದೆ.
ಯಾವ ಜಿಲ್ಲೆಗಳಲ್ಲಿ ಎಚ್ಚರಿಕೆ?
ಉತ್ತರ ಕನ್ನಡ, ಗದಗ, ಧಾರವಾಡ, ಹಾವೇರಿ, ಬೆಳಗಾವಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ & ಯಾದಗಿರಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಪ್ರದೇಶಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ & ಉಡುಪಿ ಜಿಲ್ಲೆಗಳಲ್ಲಿ 30 ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ವ್ಯಕ್ತವಾಗಿದೆ.
ಗುಡುಗು ಸಹಿತ ಮಳೆಯ ಎಚ್ಚರಿಕೆ
ಬೀದರ್, ರಾಯಚೂರು, ವಿಜಯಪುರ & ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು & ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇನ್ನು ಬೆಂಗಳೂರು ನಗರ & ಗ್ರಾಮೀಣ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಹಾಸನ, ಕೊಡಗು & ಚಾಮರಾಜನಗರ ಜಿಲ್ಲೆಗಳಲ್ಲಿ ಒಣ ಹವಾಮಾನ ಮು೦ದುವರಿಯುವ ಸಾಧ್ಯತೆ ಇದೆ.
ಬೆಂಗಳೂರು ಹವಾಮಾನ ಸ್ಥಿತಿ
ರಾಜಧಾನಿ ಬೆಂಗಳೂರಿನಲ್ಲಿ ಇಂದು ಸ್ವಲ್ಪ ಮಟ್ಟಿಗೆ ಮೋಡ ಕವಿದ ವಾತಾವರಣ ಇರಲಿದೆ. ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗಾಳಿಯ ವೇಗ ಗಂಟೆಗೆ 15 ರಿಂದ 25 ಕಿ.ಮೀ. ಇರಬಹುದು ಎ೦ದು ಹವಾಮಾನ ಇಲಾಖೆ ತಿಳಿಸಿದ್ದಾರೆ.
ಜನತೆಗೆ ಸಲಹೆ
ಯೆಲ್ಲೋ ಅಲರ್ಟ್ ಪ್ರದೇಶಗಳ ಜನರು ಎಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಸೂಚನೆ ನೀಡಿದೆ.ಭಾರಿ ಮಳೆಯ ಸ೦ದರ್ಭದಲ್ಲಿ ಅನಾವಶ್ಯಕವಾಗಿ ಹೊರಗೆ ತೆರಳದೇ ಸುರಕ್ಷಿತ ಸ್ಥಳಗಳಲ್ಲಿ ಇರಬೇಕು. ವಿದ್ಯುತ್ ಕಂಬಗಳು ಮತ್ತು ಮರಗಳ ಬಳಿ ನಿಲ್ಲುವುದನ್ನು ತಪ್ಪಿಸುವುದು ಹಾಗೂ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವುದು ಅತ್ಯಂತ ಅಗತ್ಯ.




