ಯಾದಗಿರಿ: ಸುರಪುರ ತಾಲ್ಲೂಕಿನ ಬೆಂಚಿಗಡ್ಡಿ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ವಿಜಯಪುರ ಮೂಲದ ಮಾರುತಿ(25) ಹಾಗೂ ನಾಗಾಲ್ಯಾಂಡ್ ಮೂಲದ ಆಲಾಮ್(24) ಮೃತ ದುರ್ದೈವಿಗಳಾಗಿದ್ದಾರೆ.
ಯುವಕರಿಬ್ಬರು ಸ್ನಾನ ಮಾಡಲು ಕೃಷ್ಣಾ ನದಿಗೆ ತೆರಳಿದ್ದರು. ಈ ವೇಳೆ ನದಿಗೆ ಇಳಿದಿದ್ದ ಆಲಾಮ್ ಕಾಲು ಜಾರಿದ್ದು ಮುಳುಗುವ ಸ್ಥಿತಿಯಲ್ಲಿದ್ದಾಗ ಸಹಾಯಕ್ಕಾಗಿ ಕೂಗಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಮಾರುತಿ ಸ್ನೇಹಿತನನ್ನು ರಕ್ಷಣೆ ಮಾಡಲು ಹೋಗಿ ತಾನೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ನದಿಯಲ್ಲಿ ಮುಳುಗಿದ್ದ ಯುವಕರ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ.
ಇಬ್ಬರೂ ಯುವಕರು ಬೆಂಚಿಗಡ್ಡಿಯ ಪಿಪಿಸಿಎಲ್ ವಿದ್ಯುತ್ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರಾಗಿದ್ದು ಸ್ನಾನಕ್ಕೆಂದು ನದಿಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಕೊಡೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.