ಉತ್ತರ ಪ್ರದೇಶ: ₹15,000 ಸಂಬಳ ಪಡೆಯುವ ವ್ಯಕ್ತಿಗೆ ₹33.88 ಕೋಟಿ, ₹8,500 ಆದಾಯ ಗಳಿಸುವ ವ್ಯಕ್ತಿಗೆ ₹3.87 ಕೋಟಿ ಮತ್ತು ಮೂರನೇ ವ್ಯಕ್ತಿಗೆ ₹ 7.79 ಕೋಟಿ ಆದಾಯ ತೆರಿಗೆ ನೋಟಿಸ್ ನೀಡಲಾಗಿದೆ. ತಿಂಗಳಿಗೆ ಅಲ್ಪ ಆದಾಯ ಗಳಿಸುವವರಿಗೆ ಐಟಿ ನೋಟೀಸ್ ತಲುಪಿರುವುದು ಇಡೆಂಟಿಟಿ ಕಳ್ಳತನದ ಹಿನ್ನಲೆಯ ಮತ್ತೊಂದು ಪ್ರಕರಣವಾಗಿ ಹೊರಬಿದ್ದಿದೆ.
ಇವರ ವೇತನವನ್ನು ಮಾತ್ರವೇ ಗಣನೆಗೆ ತೆಗೆದುಕೊಂಡರೂ, ಈ ವ್ಯಕ್ತಿಗಳು ಆದಾಯ ತೆರಿಗೆಯನ್ನು ಪಾವತಿಸಲೂ ಸಹ ಅರ್ಹರಾಗುವುದಿಲ್ಲ. ಈ ಸಂತ್ರಸ್ತರು ಮತ್ತು ಅವರು ಸಹಾಯಕ್ಕಾಗಿ ತೊಡಗಿಸಿಕೊಂಡವರು ನೀಡಿದ ಮಾಹಿತಿಯ ಪ್ರಕಾರ, ಕೆಲವು ವ್ಯಾಪಾರ ಸಂಸ್ಥೆಗಳು ಈ ವ್ಯಕ್ತಿಗಳ ಸರ್ಕಾರ ನೀಡಿದ ಗುರುತಿನ ಸಂಖ್ಯೆಗಳಾದ ಆಧಾರ್ ಮತ್ತು ಪ್ಯಾನ್ ಕಾರ್ಡ್ ಬಳಸಿ ವಹಿವಾಟುಗಳನ್ನು ನಡೆಸಿವೆ ಎಂದು ತಿಳಿದುಬಂದಿದೆ.
ಕರಣ್ ಕುಮಾರ್(34) ಗೆ 33.88 ಕೋಟಿ ರೂಪಾಯಿ ಆದಾಯ ತೆರಿಗೆ ನೋಟಿಸ್ ಬಂದಿದ್ದು, ಕರಣ್ ಹೆಸರಿನಲ್ಲಿ ನಕಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್ ಬಳಸಿ ಮಹಾವೀರ್ ಎಂಟರ್ಪ್ರೈಸಸ್ ಎಂಬ ಕಂಪನಿ ದೆಹಲಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಉಕ್ಕು ಸರಕುಗಳಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆಸುತ್ತಿದೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.
“ಮಾರ್ಚ್ 29ರಂದು ಸಂಜೆ 4 ಗಂಟೆಗೆ ನನಗೆ ನೋಟಿಸ್ ಬಂದಿತ್ತು. ನಾನು ಆದಾಯ ತೆರಿಗೆ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ, ಅವರು ಈ ನಿಟ್ಟಿನಲ್ಲಿ ಎಫ್ಐಆರ್ ದಾಖಲಿಸುವಂತೆ ಸಲಹೆ ನೀಡಿದರು “ಎಂದು ಎಸ್ಬಿಐನ ಖೈರ್ ಶಾಖೆಯ ಗುತ್ತಿಗೆ ಕೆಲಸಗಾರ ಕರಣ್ ಸುದ್ದಿಗಾರರಿಗೆ ತಿಳಿಸಿದರು.
ಈ ಸಂಬಂಧ ಚಂದೌಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಚಂದೌಸ್ ಹರಿಭಾನ್ ಸಿಂಗ್ ಹೇಳಿದ್ದಾರೆ.
ಅಂತೆಯೇ, ಸಾರಿಗೆ ಕಂಪನಿಯೊಂದರಲ್ಲಿ ಸಣ್ಣ ಕೆಲಸಗಾರನಾಗಿರುವ ಮೋಹಿತ್ ಕುಮಾರ್, ಮಾರ್ಚ್ 28 ರಂದು ಐಟಿ ಇಲಾಖೆ 3.87 ಕೋಟಿ ರೂಪಾಯಿಗಳ ನೋಟಿಸ್ ನೀಡಿದ ನಂತರ ಆಘಾತಕ್ಕೊಳಗಾಗಿದ್ದರು. ಅವರು ತಮ್ಮ ಉದ್ಯೋಗದಾತರ ಸಹಾಯವನ್ನು ಕೋರಿ, ಜಿಎಸ್ಟಿ ವಕೀಲರನ್ನು ಸಂಪರ್ಕಿಸಿದರು.
ಎಂ.ಕೆ.ಟ್ರೇಡರ್ಸ್ ಎಂಬ ಸಂಸ್ಥೆಯು ಅಮಿತ್ ಅವರ ಆಧಾರ್ ಕಾರ್ಡ್ ಬಳಸಿ ವ್ಯವಹಾರ ನಡೆಸುತ್ತಿದೆ ಎಂದು ವಕೀಲರು ಅವರಿಗೆ ಮಾಹಿತಿ ನೀಡಿದರು. ಆದಾಯ ತೆರಿಗೆ ಇಲಾಖೆಯ ಡಿಜಿಟಲ್ ದಾಖಲೆಗಳ ಪ್ರಕಾರ, ಎಂ. ಕೆ. ಟ್ರೇಡರ್ಸ್ 2020 ರಿಂದ ಗಣನೀಯ ಪ್ರಮಾಣದ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದೆ. ಈ ಮಾಹಿತಿಯ ಆಧಾರದ ಮೇಲೆ, ಇಲಾಖೆಯು ನೋಟಿಸ್ ಜಾರಿಗೊಳಿಸಿ, ಅಸಹಾಯಕ ಕೆಲಸಗಾರನನ್ನು ಸಂಕಷ್ಟಕ್ಕೆ ದೂಡಿದೆ.
“ನಾನು ತಿಂಗಳಿಗೆ 8,500 ರೂಪಾಯಿ ಆದಾಯದಲ್ಲಿ ಜೀವನ ನಡೆಸುತ್ತಿದ್ದೇನೆ ಮತ್ತು ನನ್ನ ವಯಸ್ಸಾದ ಪೋಷಕರನ್ನು ಸಹ ಪೋಷಿಸುತ್ತಿದ್ದೇನೆ. ಈ ನೋಟಿಸ್ ನನ್ನನ್ನು ಕಂಗಾಲಾಗಿಸಿದೆ. ನಾನು ತುಂಬಾ ಆತಂಕಗೊಂಡಿದ್ದೇನೆ” ಎಂದು ಮಾರ್ಚ್ 28 ರಂದು ಇಂಗ್ಲಿಷ್ನಲ್ಲಿ ನೋಟಿಸ್ ಪಡೆದ ಸಾಂಗೋರ್ ಗ್ರಾಮದ ಸ್ಥಳೀಯ ಅಮಿತ್ ಹೇಳಿದರು.
ನೋಟಿಸ್ ನೀಡಿದ ಐ-ಟಿ ಅಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಅವರು ಹೇಳಿದರು.
ಸಿವಿಲ್ ನ್ಯಾಯಾಲಯದ ಬಳಿಯಿರುವ ಜ್ಯೂಸ್ ಮಾರಾಟಗಾರರೂ ಸಹ ಸಂತ್ರಸ್ತರಲ್ಲಿ ಸೇರಿದ್ದಾರೆ. ಮಾರ್ಚ್ 22 ರಂದು, ದಿನಕ್ಕೆ ಕೇವಲ 500-600 ರೂ ಗಳಿಸುವ ರಯೀಸ್ ಅಹ್ಮದ್ಗೆ 7.79 ಕೋಟಿ ರೂ. ಐಟಿ ನೋಟೀಸ್ ಪಡೆದಿದ್ದಾರೆ.
ದೆಹಲಿಯಿಂದ ನೋಟಿಸ್ಗಳನ್ನು ಕಳುಹಿಸಲಾಗಿರುವುದರಿಂದ ಇಲ್ಲಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ತೆರಿಗೆ ಅಧಿಕಾರಿಗಳು ಹೇಳಿದ್ದಾರೆ. ಅಲಿಗಢದ ಹಿರಿಯ ಆದಾಯ ತೆರಿಗೆ ವಕೀಲರೊಬ್ಬರು, “ಡಿಜಿಟಲ್ ವಂಚನೆ” ಯಂತಹ ಪ್ರಕರಣಗಳು ಡಿಜಿಟಲ್ ಗುರುತಿನ ವ್ಯವಸ್ಥೆಗಳ ದೊಡ್ಡ ಪ್ರಮಾಣದ ವ್ಯವಸ್ಥಿತ ದುರುಪಯೋಗವನ್ನು ಸೂಚಿಸುತ್ತವೆ ಎಂದು ಹೇಳಿದ್ದಾರೆ.