ಆರನೇ ಮದುವೆಗೆ ಸಿದ್ದಳಾಗಿದ್ದ ಐನಾತಿ ಮಹಿಳೆಯನ್ನು ಆಕೆಯ ಮಾಜಿ ಗಂಡಂದಿರೇ ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿರುವ ಘಟನೆ ತಮಿಳು ಕರೂರ್‌ನಲ್ಲಿ ನಡೆದಿದೆ.
ಹೌದು, ಸೌಮ್ಯ ಎಂಬ ಕಿಲಾಡಿ ಲೇಡಿ ಐಷಾರಾಮಿ ಜೀವನಕ್ಕಾಗಿ ಮನೆ ಬಿಟ್ಟಿದ್ದು, ಬಳಿಕ ಮದ್ವೆಯಾಗಿ ಗಂಡಸರಿಂದ ಹಣ, ಒಡವೆ ಪಡೆದು ಅವರಿಗೆ ಪಂಗನಾಮ ಹಾಕುವ ಕಾಯಕ ಶುರು ಮಾಡಿದ್ದಳು. ಆರೋಪಿ ಸೌಮ್ಯ ಮೊದಲು ರಾಜೇಶ್ ಎಂಬ ಪೊಲೀಸ್ ಅಧಿಕಾರಿಯನ್ನು ಮದುವೆಯಾಗಿದ್ದು, ಕೆಲವೇ ದಿನಗಳಲ್ಲಿ ಅವರಿಗೆ ಕೈಕೊಟ್ಟು ನಲುಗುರಿ ಎಂಬಾತನನ್ನು ಬುಟ್ಟಿಗೆ ಹಾಕಿಕೊಂಡು ಹಸೆಮಣೆ ಏರಿದ್ದಳು. ಆತನಿಂದ ಲಾಭ ಪಡೆದು. ಎಸ್ಕೇಪ್ ಆಗಿದ್ದಳು.
ಇದಾದ ನಂತರ ಆಕೆ, ಮೂವರನ್ನು ಮದುವೆಯಾಗಿ ಅದೇ ರೀತಿ ಮೋಸ ಮಾಡಿದ್ದು, ಈ ನಡುವೆ ಎರಡು ಬಾರಿ ಜೈಲಿಗೂ ಹೋಗಿ ಬಂದಿದ್ದಳು ಎನ್ನಲಾಗಿದೆ. ಇತ್ತೀಚೆಗೆ ಓರ್ವ ಆಟೋ ಡ್ರೈವರ್‌ನನ್ನು ಬಲೆಗೆ ಹಾಕಿಕೊಂಡ ಸೌಮ್ಯ, ಆತನೊಂದಿಗೆ ಆರನೇ ಮದುವೆಯಾಗಲು ಅಣಿಯಾಗಿದ್ದಳು. ಈ ವಿಷಯ ಅರಿತ ಆಕೆಯ ೫ ಮಂದಿ ಗಂಡಂದಿರು ಮಂಟಪಕ್ಕೆ ನುಗ್ಗಿ ಮದುವೆ ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ.