ವಿಜಯಪ್ರಭ ವರದಿ: ಇತ್ತೀಚಿಗೆ ಗ್ರಾಮ ಪಂಚಾಯಿತಿ ಚುನಾವಣೆ ನಡೆದಿದೆ ಅದರಲ್ಲಿ ಕೆಲವರು ಗೆದ್ದಿದ್ದಾರೆ, ಕೆಲವರು ಸೋತಿದ್ದಾರೆ. ಆದರೆ ಗೆದ್ದೋರು ಮಾಡಬೇಕಾದ ಕೆಲಸಗಳೇನು? ಗ್ರಾಮ ಪಂಚಾಯಿತಿಯ ಕರ್ತವ್ಯಗಳೇನು? ಹೊಣೆಗಳೇನು? ಎಂಬುವುದು ಪ್ರತಿಯೊಬ್ಬ ಜನಸಾಮಾನ್ಯ ಕೂಡ ತಿಳಿದುಕೊಳ್ಳಲೇಬೇಕಾದ ವಿಷಯ.
ಇತ್ತೀಚಿಗೆ ಜನಾರ್ದನ್ ಎಂಬುವರು ಜನಾಧಿಕಾರ ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಅವರು ಗ್ರಾಮ ಪಂಚಾಯಿತಿಯ ಕರ್ತವ್ಯಗಳು ಯಾವುವು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಈ ಪುಸ್ತಕದ ಪ್ರಕಾರ ಒಟ್ಟು ಐದು ರೀತಿಯ ಹೊಣೆಗಳನ್ನು ಗ್ರಾಮ ಪಂಚಾಯಿತಿ ಹೊಂದಿದೆ ಅದರಲ್ಲಿ ಎರಡನ್ನು ಮಾತ್ರ ತಿಳಿದುಕೊಳ್ಳೋಣ.
01. ಕಡ್ಡಾಯ ಹೊಣೆಗಳು (ಮಾಡಲೇಬೇಕಾದ ಕರ್ತವ್ಯಗಳು)
02. ವಿವೇಚನಾನುಸರಿ ಹೊಣೆಗಳು
ಕಡ್ಡಾಯ ಹೊಣೆಗಳು (ಮಾಡಲೇಬೇಕಾದ ಕರ್ತವ್ಯಗಳು):
1. ಈ ವ್ಯಾಪ್ತಿಯಲ್ಲಿ ಶೌಚಾಲಯ ಹೊಂದಿರದ ಮನೆಯಿದ್ದರೆ ಅಂತಹ ಮನೆಗಳಿಗೆ ಶೌಚಾಲಯದ ಸೌಲಭ್ಯವನ್ನು ಒದಗಿಸಿಕೊಡುವುದು.
2. ಪುರುಷರಿಗೆ ಮತ್ತು ಮಹಿಳೆಯರಿಗೆ ಅಗತ್ಯಕ್ಕೆ ತಕ್ಕಷ್ಟು ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡುವುದು.
3. ಸಾಕಷ್ಟು ಸಂಪನ್ಮೂಲಗಳನ್ನು ಸೃಷ್ಟಿಸಿ ಸ್ವಯಂ ಅಥವಾ ಕರಾರಿನ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡುವುದು.
4. ಕಾಯಿದೆ ನಿಗದಿಗೊಳಿಸಿರುವ ತೆರಿಗೆ, ದರ ಮತ್ತು ಶುಲ್ಕಗಳನ್ನು ವಿಧಿಸುವುದು ಮತ್ತು ಅವುಗಳನ್ನು ನಿಯತಕಾಲಿಕವಾಗಿ ಪರಿಷ್ಕರಿಸುವುದು ಮತ್ತು ಸಂಗ್ರಹಿಸುವುದು.
5. ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಾರ್ವತ್ರಿಕ ಧಾಖಲಾತಿಯನ್ನು ಖಚಿತಪಡಿಸಿಕೊಳ್ಳುವುದು.
6. ಮಕ್ಕಳಿಗೆ ಸಾರ್ವತ್ರಿಕವಾಗಿ ರೋಗ ನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮಗಳನ್ನೂ ಸಾಗಿಸುವುದು
7. ಜನನ ಮತ್ತು ಮರಣಗಳ ತ್ವರಿತ ನೋಂದಣಿಯಾಗಬೇಕು ಎಂಬುದನ್ನು ನೋಡಿಕೊಳ್ಳುವುದು.
8. ನೈರ್ಮಲ್ಯ ಮತ್ತು ಚರಂಡಿ ವ್ಯವಸ್ಥೆ ಸರಿಯಿದೆಯಾ ಎಂಬುದನ್ನು ನೋಡಿ ಅದನ್ನು ವ್ಯವಸ್ಥೆ ಮಾಡುವುದು
9. ಸಾರ್ವಜನಿಕ ರಸ್ತೆಗಳನ್ನು ನಿರ್ಮಿಸಿ ನಿರ್ವಹಿಸುವುದು
10. ಸಾರ್ವಜನಿಕ ರಸ್ತೆ ಮತ್ತು ಸ್ಥಳಗಳ ಒತ್ತುವರಿಯನ್ನು ತೆಗೆದು ಹಾಕುವುದು
11. ಅಗತ್ಯವಿರುವಷ್ಟು ಬೀದಿ ದೀಪಗಳನ್ನ ಅಳವಡಿಸವುದು ಮತ್ತು ವಿದ್ಯುತ್ ಬಿಲ್ಲುಗಳು ಸಕಾಲದಲ್ಲಿ ಸಂದಾಯ ಆಗುತ್ತಿದೆಯಾ ಎಂಬುದನ್ನು ನೋಡಿಕೊಳ್ಳುವುದು
12. ಆರೋಗ್ಯಕ್ಕೆ ಹಾನಿಕರವಾದ ಅನೈರ್ಮಲ್ಯದ ಗುಂಡಿಗಳನ್ನು ತುಂಬುವುದು ಮತ್ತು ಅನಾರೋಗ್ಯಕರ ಪ್ರದೇಶಗಳನ್ನ ಆರೋಗ್ಯಕರವಾಗಿ ಪರಿವರ್ತಿಸುವುದು.
13. ಹುಚ್ಚು ನಾಯಿಗಳನ್ನು ಕೊಲ್ಲುವುದು ಮತ್ತು ಬೀದಿನಾಯಿಗಳು ಮತ್ತು ಮಾಲೀಕರಿಲ್ಲದ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸಂತಾನಹರಣ ಚಿಕಿತ್ಸೆ ಮಾಡಿಸುವುದು.
14. ಗ್ರಾಮ ಪಂಚಾಯಿತಿಗಳಲ್ಲಿ ನಿಹಿತವಾಗಿರುವ ಎಲ್ಲಾ ಸಮುದಾಯಗಳ ಆಸ್ತಿಯನ್ನು ನಿರ್ವಹಿಸುವುದು.
15. ಜನಗಣತಿ, ಬೆಳೆಗಣತಿ, ಜಾನುವಾರು ಗಣತಿ, ನಿರುದ್ಯೋಗಿಗಳ ಗಣತಿ ಮತ್ತು ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳ ಗಣತಿಗೆ ಸಂಬಂದಿಸಿದ ದಾಖಲಾತಿಯನ್ನು ನಿರ್ವಹಿಸುವುದು.
16. ವಸ್ತುಗಳನ್ನು ಮತ್ತು ಗೊಬ್ಬರವನ್ನು ರಾಶಿ ಹಾಕುವುದಕ್ಕೆ ವಾಸದ ಮನೆಗಳಿಂದ ದೂರದಲ್ಲಿರುವ ಜಾಗಗಳನ್ನು ಗುರುತಿಸುವುದು, ಜೈವಿಕ ವೈವಿಧ್ಯವನ್ನು ಸಂರಕ್ಷಿಸುವುದು.
ಇನ್ನು ವಿವೇಚನಾನುಸರಿ ಹೊಣೆಗಳ ಬೆಗ್ಗೆ ಮುಂದಿನ ಭಾಗದಲ್ಲಿ ತಿಳಿದುಕೊಳ್ಳೋಣ,,,,
ಇದನ್ನು ಓದಿ: ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣಾ ಆಯೋಗದಿಂದ ಮೀಸಲು ಮಾರ್ಗಸೂಚಿ ಪ್ರಕಟ