ವಿಜಯನಗರ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಸಾರಿಗೆ ಬಸ್ಸೊಂದು ರಸ್ತೆ ಪಕ್ಕದ ಕಾಲುವೆಗೆ ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, 20ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಹರಪನಹಳ್ಳಿ ತಾಲ್ಲೂಕಿನ ಸತ್ತೂರು ಗ್ರಾಮದ ಬಳಿ ಸಂಭವಿಸಿದೆ. ಸತ್ತೂರು ಗ್ರಾಮದ ಹನುಮಕ್ಕ(45) ಮೃತ ದುರ್ದೈವಿ ಮಹಿಳೆ.
ಬಸ್ಸು ದಾವಣಗೆರೆಯಿಂದ ಹರಪನಹಳ್ಳಿಗೆ ಹೊರಟಿತ್ತು. ಸುತ್ತೂರು ಗ್ರಾಮದ ಬಳಿ ಸಂಚರಿಸುತ್ತಿದ್ದ ವೇಳೆ ಬಸ್ಸು ನಿಯಂತ್ರಣ ಕಳೆದುಕೊಂಡಿದ್ದು, ರಸ್ತೆ ಪಕ್ಕದಲ್ಲೇ ಇದ್ದ ಕಾಲುವೆಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಬಸ್ಸು ಬಿದ್ದ ರಭಸಕ್ಕೆ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಓರ್ವರ ಸ್ಥಿತಿ ಗಂಭೀರವಾಗಿದೆ.
ಬಸ್ಸು ಬಿದ್ದ ಕೂಡಲೇ ಸ್ಥಳೀಯರು ಪ್ರಯಾಣಿಕರ ನೆರವಿಗೆ ಬಂದಿದ್ದು ಗಾಯಾಗಳುಗಳನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.