ಬೆಂಗಳೂರು: ಕರ್ನಾಟಕದಲ್ಲಿ ಒಟ್ಟು 63 ಲಕ್ಷ ವಾಹನಗಳು 15 ವರ್ಷಕ್ಕಿಂತ ಹಿಂದಿನವು ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷ ಮಾರ್ಚ್‌ವರೆಗೆ 40.2 ಲಕ್ಷ ದ್ವಿಚಕ್ರ ವಾಹನ, 11 ಲಕ್ಷ ಕಾರು, 2.2 ಲಕ್ಷ ಲಾರಿಗಳು ಹಾಗೂ 2.6 ಆಟೋ ರಿಕ್ಷಾಗಳು 15 ವರ್ಷಕ್ಕಿಂತ ಹಳೆಯದಾಗಿವೆ.
20 ವರ್ಷ ಹಳೆಯದಾದ ವೈಯಕ್ತಿಕ ವಾಹನ ಹಾಗೂ 15 ವರ್ಷ ಹಳೆಯದಾದ ವಾಣಿಜ್ಯ ಬಳಕೆ ವಾಹನಗಳನ್ನು ಗುಜರಿ ಸಾಲಿಗೆ ಸೇರಿಸಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ವೇಳೆ ಹೇಳಿದ್ದರು.
ಹಳೇ ವಾಹನಗಳು ಬ್ಯಾನ್?
ಈ ಹಿನ್ನಲೆಯಲ್ಲಿ 15-20 ವರ್ಷ ದಾಟಿದ ವಾಹನಗಳನ್ನು ನಿಷೇಧಿಸುವ ವಾಹನ ಗುಜರಿ ಯೋಜನೆಯನ್ನು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಸ್ತಾಪಿಸಿತ್ತು. ಬೆಂಗಳೂರು ನಗರದಲ್ಲಿ ಟ್ರಾಫಿಕ್ ಹೆಚ್ಚಳವಾಗುತ್ತಿದ್ದು, ವಾಯುಮಾಲಿನ್ಯ ಏರುತ್ತಿದೆ. ಇದನ್ನು ತಡೆಗಟ್ಟಲು ಬೆಂಗಳೂರಿನಲ್ಲಿ ಈ ಯೋಜನೆ ಜಾರಿಗೆ ತರಲು ಸಕಲ ಸಿದ್ಧತೆ ನಡೆದಿದೆ. 15 ವರ್ಷ ಮೇಲ್ಪಟ್ಟ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡದಿರಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ. ನಿಮ್ಮ ಬಳಿ ಇರುವ ಹಳೇ ವಾಹನ ಸದ್ಯದಲ್ಲೇ ಗುಜರಿ ಸೇರುವುದಂತೂ ಸತ್ಯ.