ಬೆಂಗಳೂರು: ರಾಜ್ಯದಲ್ಲಿ ಮರಾಠ ಪ್ರಾಧಿಕಾರ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಮರಾಠ ಪ್ರಾಧಿಕಾರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿವೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಪ್ರತಿಕ್ರಿಯಿಸಿದ್ದು, ಮರಾಠ ಪ್ರಾಧಿಕಾರ ರಚನೆಯಿಂದ ಕನ್ನಡಿಗರಿಗೆ ಅನ್ಯಾಯವಾಗಲಿದೆ, ಈ ಕೂಡಲೇ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ. ಮರಾಠ ಪ್ರಾಧಿಕಾರ ರಚನೆಯ ಹಿಂದೆ ಬಾರಿ ಪಿತೂರಿ ಇದೆ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸಹ ಇದ್ದಾರೆ ಎಂದು ವಾಟಾಳ ನಾಗರಾಜ್ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಎಂದು ಕೂಡ ಇಂತಹ ಪರಿಸ್ಥಿತಿ ಬಂದಿರಲಿಲ್ಲ ಎಂದು ವಾಟಾಳ ನಾಗರಾಜ್ ಹೇಳಿದ್ದು, ಇಂದು ಮರಾಠಿ, ನಾಳೆ ತಮಿಳು, ನಾಡಿದ್ದು ತೆಲುಗು ಪ್ರಾಧಿಕಾರ ರಚನೆ ಮಾಡ್ತಾರೆ.
ಈ ರೀತಿ ಆಗಲು ನಾವು ಯಾವುದೇ ಕಾರಣಕ್ಕೂ ಬಿಡಲ್ಲ. ಈ ವಿಚಾರವಾಗಿ ಇಡೀ ಕನ್ನಡಿಗರು ಹೋರಾಟ ಮಾಡಬೇಕು. ನಾನಂತು ಹೋರಾಟ ಮಾಡಲು ಸಿದ್ಧನಾಗಿದ್ದು, ಇದ್ರಿಂದ ಜೈಲಿಗೆ ಹೋಗಲು ಸಿದ್ದ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.