ನವದೆಹಲಿ: ಕೇಂದ್ರ ಸರ್ಕಾರವು ರೈತರಿಗಾಗಿ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಪರಿಚಯಿಸಿದ್ದು ಎಲ್ಲರಿಗು ತಿಳಿದ ವಿಷಯ . ಇದರ ಅಡಿಯಲ್ಲಿ ಪ್ರತಿ ವರ್ಷ ಮೂರು ಕಂತುಗಳಲ್ಲಿ 6,000 ರೂ. ರೈತರ ಖಾತೆಗೆ ಜಮಾ ಆಗುತ್ತದೆ. ಈಗ ಮತ್ತೊಂದು ಯೋಜನೆ ರೈತರಿಗೆ ಲಭ್ಯವಿದೆ. ಈ ಹಿಂದೆ ಪ್ರಧಾನಿ ಮೋದಿ ಅವರು ರೈತರಿಗಾಗಿ “ಕಿಸಾನ್ ಮನ್ ಧನ್ ಯೋಜನೆ”ಯನ್ನು ಪರಿಚಯಿಸಿದ್ದರು. ಈ ಬಗ್ಗೆ ಅರಿವಿನ ಕೊರತೆಯಿಂದಾಗಿ ಕೆಲವೇ ಕೆಲವು ರೈತರು ಸೇರಿಕೊಂಡಿದ್ದಾರೆ.
ಪಿಎಂ ಕಿಸಾನ್ ಮನ್ ಧನ್ ಯೋಜನೆ ಸಣ್ಣ ಮತ್ತು ಅಂಚಿನಲ್ಲಿರುವ ರೈತರ ಸಾಮಾಜಿಕ ಭದ್ರತೆಗಾಗಿ ಸರ್ಕಾರದ ಯೋಜನೆಯಾಗಿದೆ. 18 ರಿಂದ 40 ವರ್ಷದೊಳಗಿನ 2 ಹೆಕ್ಟೇರ್ ವರೆಗೆ ಕೃಷಿ ಮಾಡಬಹುದಾದ ಜಮೀನು ಹೊಂದಿರುವ ಸಣ್ಣ, ಅತಿಸಣ್ಣ ರೈತರು ಈ ಯೋಜನೆಯಡಿ ಲಾಭ ಪಡೆಯಲು ಅರ್ಹರು. ಈ ಯೋಜನೆಯಡಿ, 60 ವರ್ಷದ ನಂತರ, ರೈತರಿಗೆ ತಿಂಗಳಿಗೆ ಕನಿಷ್ಠ 3000 / – ರೂ. ಪಿಂಚಣಿ ಸಿಗುತ್ತದೆ. ಒಂದು ವೇಳೆ ರೈತ ಸತ್ತರೆ, ರೈತನ ಸಂಗಾತಿಗೆ ಕುಟುಂಬ ಪಿಂಚಣಿಯಾಗಿ ಶೇಕಡಾ 50 ರಷ್ಟು ಪಿಂಚಣಿ ಸಿಗುತ್ತದೆ.
ಈ ಯೋಜನೆಯಲ್ಲಿ 18 ರಿಂದ 40 ವರ್ಷದೊಳಗಿನ ಚಂದಾದಾರರು 60 ವರ್ಷ ತುಂಬುವವರೆಗೆ ತಿಂಗಳಿಗೆ 55 ರಿಂದ 200 ರೂ ಕಟ್ಟಬೇಕು. ಚಂದಾದಾರರು 60 ವರ್ಷ ತಲುಪಿದ ಕೂಡಲೇ ಪಿಂಚಣಿ ಮೊತ್ತವನ್ನು ಪಡೆಯಬಹುದು. ಸಂಬಂಧಪಟ್ಟ ವ್ಯಕ್ತಿಯ ಪಿಂಚಣಿ ಖಾತೆಗೆ ಪ್ರತಿ ತಿಂಗಳು 3,000 ರೂ. ಜಮಾ ಆಗುತ್ತದೆ. ಈ ಯೋಜನೆಯಲ್ಲಿ ನೀವು ಅರ್ಜಿ ಸಲ್ಲಿಸಲು ಬೇಕಾಗಿರುವುದು ಆಧಾರ್ ಕಾರ್ಡ್, ಸೇವಿಂಗ್ಸ್ ಬ್ಯಾಂಕ್ ಖಾತೆ / ಪಿಎಂ-ಕಿಸಾನ್ ಖಾತೆ, ಹೊಲದ ಪಹಣಿ, ಎರಡು ಫೋಟೋಗಳು ಸಾಕು. ಆದರೆ, ಪಿಎಂ ಕಿಸಾನ್ ಯೋಜನೆಯಡಿ ಇರುವವರು ಯಾವುದೇ ದಾಖಲೆಗಳಿಲ್ಲದೆ ಉಚಿತವಾಗಿ ಯೋಜನೆಗೆ ಸೇರಬಹುದು.