ಬೆಂಗಳೂರು: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಆರ್.ಆರ್.ನಗರ ಉಪ ಚುನಾವಣಾ ಪ್ರಚಾರ ವೇಳೆ ಮಾಜಿ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಹೆಸರನ್ನು ಬಳಸಬಾರದು ಎಂದು ಹೇಳಿಕೆ ನೀಡಿದ್ದ ಹಿನ್ನೆಲೆ ಕಾಂಗ್ರೆಸ್ ನಾಯಕಿ ಉಮಾಶ್ರೀ ಅವರು ಇಂದು ಮಾತನಾಡಿದ್ದಾರೆ.
ಕುಸುಮಾ ಅವರು ಸಂಪ್ರದಾಯ ಬದ್ಧವಾಗಿ ಡಿ.ಕೆ.ರವಿ ಅವರನ್ನು ವಿವಾಹವಾಗಿದ್ದಾರೆ. ಅವರ ಹೆಸರು ಬಳಸಿಕೊಳ್ಳಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಸಂಸದರು ಒಂದೇ ದಿಕ್ಕಿನಲ್ಲಿ ಯೋಚಿಸಬಾರದು ಎಂದಿದ್ದಾರೆ.
ಕುಸುಮಾ ಸಣ್ಣ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡಿದ್ದಾರೆ. ಆಕೆಯ ನೋವು ಯಾರಿಗೆ ಅರ್ಥವಾಗುತ್ತದೆ? ನೋವನ್ನು ಮರೆತು ಸಮಾಜ ಸೇವೆ ಮಾಡಬೇಕೆಂದು ಬಂದಿದ್ದಾರೆ.
ಶೋಭಾ ಅವರೇ ವಿದ್ಯಾವಂತ ಹೆಣ್ಣು ಮಗುವಿಗೆ ಗೌರವ ನೀಡಿ. ಇದನ್ನು ಚರ್ಚಾ ವಿಷಯವನ್ನಾಗಿ ಮಾಡಬೇಡಿ. ಕುಸುಮಾ ಅಭ್ಯರ್ಥಿ ಆಗಿದ್ದಕ್ಕೆ ನಿಮಗೆ ಭಯ ಶುರುವಾಗಿದೆ. ಹಾಗಾಗಿ ಹೀಗೆ ಮಾತನಾಡುತ್ತಿದ್ದೀರಿ ಎಂದು ಉಮಾಶ್ರೀ ಅವರು ಟಾಂಗ್ ನೀಡಿದ್ದಾರೆ.