Mysore Jamboosawari : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೀಯ ಜಂಬೂಸವಾರಿಗೆ ಇಂದು (ಅ.12) ಚಾಲನೆ ದೊರೆಯಲಿದ್ದು, ಶುಭ ಕುಂಭ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಹೌದು, ನಾಡ ಅಧಿದೇವತೆ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯದಶಮಿ ಮೆರವಣಿಗೆಗೆ ನಡೆಯಲಿದ್ದು, ಶನಿವಾರ ಸಂಜೆ 4 ರಿಂದ 4:30ರೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಗಣ್ಯರು 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುತ್ತಾರೆ. ಇದರೊಂದಿಗೆ ಜಂಬೂಸವಾರಿ ಪ್ರಾರಂಭವಾಗುತ್ತದೆ. ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆಯೊಂದಿಗೆ ಗಜಪಡೆ ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗಿ ಬರಲಿದೆ.
ರಾಜರ ಕಾಲದ ಮೈಸೂರು ದಸರಾ ಹೇಗೆ ನಡೆಯುತ್ತಿತ್ತು ಗೊತ್ತಾ?
ಜಂಬೂಸವಾರಿಯು ಅರಮನೆ ಆವರಣದಿಂದ ನಿಗದಿತ ಶುಭ ಮುಹೂರ್ತದಲ್ಲಿ ಆರಂಭವಾಗುತ್ತಿತ್ತು. ಈ ವೇಳೆ ಇಪ್ಪತ್ತೊಂದು ಕುಶಾಲತೋಪು ಹಾರಿಸಲಾಗುತ್ತಿತ್ತು. ತುತ್ತೂರಿ ಮತ್ತು ಕಹಳೆಯ ಶಬ್ದದೊಂದಿಗೆ ಮೆರವಣಿಗೆ ಆರಂಭವಾಗುತ್ತಿತ್ತು.
ಈ ವೇಳೆ ಮಹಾರಾಜರ ಸುತ್ತಲೂ ಅಂಗರಕ್ಷಕರು, ಅಶ್ವದಳ, ಅಧಿಕಾರಿಗಳು ನೆರೆಯುತ್ತಿದ್ದರು. ಮಹಾರಾಜರ ಸಹಿತ ಚಿನ್ನದ ಅಂಬಾರಿಯನ್ನು ಹೊತ್ತು ಗಜಪಡೆ ಸಾಗುತ್ತಿತ್ತು. ಮಹಾರಾಜರನ್ನು ನೋಡಲು ಜನ ಕಿಕ್ಕಿರಿದು ನೆರೆಯುತ್ತಿದ್ದರು. ಈಗ ರಾಜರ ಬದಲು ಚಾಮುಂಡಿ ತಾಯಿಯನ್ನು ಚಿನ್ನದ ಅಂಬಾರಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಮೈಸೂರು ಅರಮನೆಯಲ್ಲಿರುವ ರತ್ನಖಚಿತ ಸಿಂಹಾಸನದ ಕಥೆ!
ಮೈಸೂರಿನ ಅರಮನೆಯಲ್ಲಿರುವ ರತ್ನ ಸಿಂಹಾಸನವು ಪಾಂಡವರಿಗೆ ಸೇರಿದ್ದು ಎನ್ನಲಾಗುತ್ತದೆ. ಕಂಪಿಲರಾಯ ಎನ್ನುವ ರಾಜ ಈ ಸಿಂಹಾಸನವನ್ನು ಪೆನುಗೊಂಡಕ್ಕೆ ತಂದು ಅದನ್ನು ಅಲ್ಲಿ ನೆಲದ ಒಳಗೆ ಹೂತಿದ್ದ ಎನ್ನಲಾಗಿದ್ದು, ನಂತರ 1336 ರಲ್ಲಿ ವಿಜಯನಗರ ಸಂಸ್ಥಾನದ ಕುಲಪತಿ ವಿದ್ಯಾರಣ್ಯರು ಹರಿಹರನಿಗೆ ಇದರ ಬಗ್ಗೆ ಮಾಹಿತಿ ನೀಡಿದರು.
ನಂತರ 17 ನೇ ಶತಮಾನದಲ್ಲಿ ಶ್ರೀರಂಗಪಟ್ಟಣದಲ್ಲಿ ವಿಜಯನಗರದ ರಾಜ್ಯಪಾಲರು ಈ ಸಿಂಹಾಸನವನ್ನು ಸ್ವಾಧೀನಕ್ಕೆ ಪಡೆದು, 1609 ರಲ್ಲಿ ರಾಜ ಒಡೆಯರ್ ಸಿಂಹಾಸನವನ್ನು ತಮ್ಮ ಆಡಳಿತಕ್ಕೆ ಸೇರಿಸಿಕೊಂಡರು.