ಬಾಗಲಕೋಟೆ : ರಾಜ್ಯದಲ್ಲಿ ಕುರುಬ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರಿಸಲು ಆಗ್ರಹಿಸಿ ಇಂದು ಬಾಗಲಕೋಟೆ ನಗರದಲ್ಲಿ ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದ ಪುರಿ ಶ್ರೀಗಳ ನೇತೃತ್ವದಲ್ಲಿ ಬೆಳಗಾವಿ ವಿಭಾಗ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಈ ವೇಳೆ ಮಾತನಾಡಿದ ಕುರುಬ ಸಮಾಜ ಮುಖಂಡ ಎಂ ಎಲ್.ಶಾಂತಗಿರಿ, ಇಂದು ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದ್ದು, ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬುದು ಎರಡೂವರೆ ದಶಕಗಳ ಹಿಂದಿನ ಬೇಡಿಕೆಯಾಗಿದ್ದು, ಈ ಬಾರಿ ನಿರ್ಣಾಯಕ ಹೋರಾಟಕ್ಕೆ ಸಮಾಜ ಮುಂದಡಿ ಇಟ್ಟಿದೆ ಎಂದು ಹೇಳಿದ್ದಾರೆ.
ಕರೋನ ಸೋಂಕು ಹಿನ್ನಲೆ ಮುಂಜಾಗ್ರತಾ ಕ್ರಮಗಳ ನಡುವೆ ಸಮಾವೇಶವನ್ನು ಸಂಘಟಿಸಿದ್ದು, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಸೇರಿದಂತೆ ಹಲವು ಜಿಲ್ಲೆಗಳಿಂದಲೂ ಕುರುಬ ಸಮುದಾಯದವರು ಬರುವ ನಿರೀಕ್ಷೆ ಇದೆ ಎಂದು ಕುರುಬ ಸಮಾಜ ಮುಖಂಡ ಎಂ ಎಲ್.ಶಾಂತಗಿರಿ ಹೇಳಿದ್ದಾರೆ.
ಸಮಾವೇಶಕ್ಕೆ ಬರುವ ಎಲ್ಲರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಿದ್ದು, ಸುರಕ್ಷಿತ ಅಂತದಲ್ಲಿ ಕುರ್ಚಿಗಳನ್ನು ಜೋಡಿಸಲಾಗಿದ್ದು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಈ ಸಮಾವೇಶದ ನೇತೃತ್ವವನ್ನು ಕಾಗಿನೆಲೆ ಗುರುಪೀಠದ ನಿರಂಜನಾನಂದ ಪುರಿ ಶ್ರೀಗಳು ವಹಿಸಲಿದ್ದಾರೆ.
ಇನ್ನೂ ಈ ಸಮಾವೇಶಕ್ಕೆ ಕುರುಬ ಸಮಾಜದ ಮುಖಂಡರು, ಶಾಸಕರಾದ ಭೈರತಿ ಬಸವರಾಜ್, ಸಚಿವ ಕೆ ಎಸ್ ಈಶ್ವರಪ್ಪ, ಎಂ ಟಿ ಬಿ ನಾಗರಾಜ್, ಎಚ್ ವಿಶ್ವನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಹಲವು ಮುಖಂಡರು ಹಾಗು ನಾಲ್ಕು ವಿಭಾಗಗಳ ವ್ಯಾಪ್ತಿಯ ಸಮಾಜದ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.