ಬೆಂಗಳೂರು: ಐಪಿಎಲ್ ಕ್ರಿಕೆಟ್ ಟೂರ್ನಿ ಮೆಗಾ ಹರಾಜು ಪ್ರಕ್ರಿಯೆ ಇಂದು, ನಾಳೆ ನಡೆಯಲಿದ್ದು, ಐಪಿಎಲ್ ಮೆಗಾ ಹರಾಜು ಇನ್ನೇನು ಆರಂಭವಾಗಲಿದೆ.
ಈ ಬಾರಿ ಐಪಿಎಲ್ ಕ್ರಿಕೆಟ್ ಟೂರ್ನಿ ಮೆಗಾ ಹರಾಜು ಪ್ರಕ್ರಿಯೆ ಹೊಸದಾಗಿ ಲಖನೌ ಸೂಪರ್ ಜೈಂಟ್ಸ್ & ಗುಜರಾತ್ ಟೈಟನ್ಸ್ ಫ್ರಾಂಚೈಸಿ ಸೇರಿದಂತೆ 10 ಫ್ರಾಂಚೈಸಿಗಳು ಬಿಡ್ ಸಲ್ಲಿಸಲಿದ್ದಾರೆ. ಒಟ್ಟು 590 ಆಟಗಾರರು ಹರಾಜು ಪಟ್ಟಿಯಲ್ಲಿದ್ದು, ಈ ಪೈಕಿ 370 ಭಾರತೀಯರು & 220 ವಿದೇಶಿ ಆಟಗಾರರಿದ್ದಾರೆ.
ಇನ್ನು, ಸ್ಟಾರ್ ಆಟಗಾರರಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್, ರವಿಚಂದ್ರನ್ ಅಶ್ವಿನ್, ರಾಬಿನ್ ಉತ್ತಪ್ಪ, ದೇವದತ್ತ ಪಡಿಕ್ಕಲ್, ಡೇವಿಡ್ ವಾರ್ನರ್ ಯಾವ ತಂಡ ಸೇರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಹೇಗಿರಲಿದೆ ಐಪಿಎಲ್ ಮೆಗಾ ಹರಾಜು?
ಈ ಬಾರಿ ಒಟ್ಟು 217 ಆಟಗಾರರಿಗೆ ಬಿಡ್ಡಿಂಗ್ ನಡೆಯಲಿದ್ದು, 1 ತಂಡ ಕನಿಷ್ಟ 18 ಆಟಗಾರರನ್ನು ಖರೀದಿಸಬೇಕಾಗಿದ್ದು, ಗರಿಷ್ಠ 25 ಆಗಿದೆ. ಇಲ್ಲಿ 217 ಆಟಗಾರರಿಗೂ ಅವಕಾಶ ಸಿಗಲೇಬೇಕು ಎಂದೇನಿಲ್ಲ. ತಂಡವೊಂದು ತನ್ನ ಬಳಿಯಿರುವ ಎಲ್ಲಾ ಮೊತ್ತವನ್ನು ವ್ಯಯಿಸಿ 18 ಆಟಗಾರರನ್ನು ಮಾತ್ರ ಖರೀದಿಸಬಹುದಾಗಿದೆ.
ಇನ್ನು, ತಂಡ ಖರ್ಚು ಮಾಡುವ ಆಧಾರದ ಮೇಲೆ ಆಟಗಾರರಿಗೆ ಅವಕಾಶ ಸಿಗಲಿದ್ದು, ಇಂದು 161 ಆಟಗಾರರ ಹರಾಜು ನಡೆಯಲಿದ್ದು, ಉಳಿದ ಆಟಗಾರರ ಬಿಡ್ಡಿಂಗ್ ನಾಳೆ ನಡೆಯಲಿದೆ.