ಬೆಂಗಳೂರು : ಸಿನಿಮಾ ದೃಶ್ಯದಲ್ಲಿ ನಾಯಿ ಸತ್ತಿದ್ದಕ್ಕೆ ಕಣ್ಣೀರಿಟ್ಟ ಮುಖ್ಯಮಂತ್ರಿಗಳಿಗೆ ಈಗ ಕಣ್ಣೀರು ಬರುತ್ತಿಲ್ಲ. ಮಳೆಯಿಂದ ಆಗುತ್ತಿರುವ ಪ್ರತಿ ಸಾವಿಗೂ ಸರಕಾರವೇ ನೇರ ಹೊಣೆ. ಮೊಸಳೆ ಕಣ್ಣೀರಿನ ಈ ಸೋಗಿನ ಸರಕಾರ ಸಾವಿನ ವ್ಯಾಪಾರ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಎಚ್ ಡಿ ಕುಮಾರಸ್ವಾಮಿ, ಒಂದು ತಿಂಗಳ ಹಿಂದೆ ಸುರಿದ ಮಳೆಯಿಂದ ಕೆ.ಅರ್.ಪುರ ವಿಧಾನಸಭೆ ಕ್ಷೇತ್ರ ಸ್ವಿಮ್ಮಿಂಗ್ ಪೂಲ್ ಆಗಿತ್ತು. ಸಾಯಿ ಲೇಔಟ್ ನೀರಿನಲ್ಲಿ ತೇಲಿ ಬೆಂಗಳೂರಿನ ಹೆಗ್ಗಳಿಕೆಯನ್ನೇ ಅಣಕಿಸಿತ್ತು. ಇವತ್ತೂ ಅಂಥವೇ ದೃಶ್ಯಗಳು ಆ ಕ್ಷೇತ್ರದಲ್ಲಿ ಮರುಕಳಿಸಿವೆ.
ರಾಜಕಾಲುವೆಯಲ್ಲಿ ನತದೃಷ್ಟ ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ. ಗೋಡೆ ಕುಸಿದು ಮಹಿಳೆಯೊಬ್ಬರು ಅಸುನೀಗಿದ್ದಾರೆ. ಕಳೆದ ತಿಂಗಳು ಸುರಿದ ಮಳೆಯಿಂದ ತತ್ತರಿಸಿದ ಕೆ.ಆರ್.ಪುರದಲ್ಲಿ ಭಾರೀ ಹಾನಿ ಆಗಿದ್ದರೂ ಸ್ಥಳೀಯ ಶಾಸಕರೂ ಆಗಿರುವ ನಗರಾಭಿವೃದ್ಧಿ ಸಚಿವರು ಮತ್ತು ಬಿಬಿಎಂಪಿ ತಿಂಗಳಾದರೂ ಎಚ್ಚೆತ್ತುಕೊಂಡಿಲ್ಲ!! ಯಾಕೆ?
ಎಸ್.ಆರ್.ಲೇಔಟ್’ನಲ್ಲಿನ ಅಪಾರ್ಟ್’ಮೆಂಟ್ ಜಲಾವೃತವಾಗಿದೆ. ನೆಲಮಹಡಿ ಸಂಪೂರ್ಣ ಜಲಾವೃತವಾಗಿ, 100 ಕಾರು, 300 ಬೈಕುಗಳು ತೇಲಿವೆ. ನಿವಾಸಿಗಳು ಹೊರ ಬರಲಾಗದೆ ಮನೆಗಳಲ್ಲೇ ಬಂಧಿಗಳಾಗಿದ್ದಾರೆ. ಕೆ.ಆರ್.ಪುರ ಕ್ಷೇತ್ರದಲ್ಲಿ ಬಹುತೇಕ ಅಪಾರ್ಟ್’ಮೆಂಟ್ ಗಳ ಹಣೆಬರಹ ಇಷ್ಟೇ ಆಗಿದೆ.
ಕೆ.ಆರ್.ಪುರದ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿಗೆ ಮಳೆನೀರು ನುಗ್ಗಿ ದಾಖಲೆಗಳು ಸಂಪೂರ್ಣ ನಾಶವಾಗಿವೆ. ಕಂಪ್ಯೂಟರ್ ಗಳು ನೀರುಪಾಲಾಗಿ, ಈ ಸಾಲಿನ ಎಸ್ ಎಸ್ ಎಲ್ ಸಿ ಮಕ್ಕಳ ದಾಖಲೆಗಳು ಒತ್ತುವರಿ ಆಗಿರುವ ರಾಜಕಾಲುವೆ ಪಾಲಾಗಿವೆ. ಇದು ಬಿಜೆಪಿ ಸರಕಾರದ ವೈಖರಿ!?
ಮೇ ಮಳೆಯಲ್ಲಿ ಎರಡು ದಿನ ಜಪಾನ್ ಸುನಾಮಿ ದೃಶ್ಯಗಳನ್ನು ನೆನಪಿಸಿದ ರಾಮಮೂರ್ತಿ ನಗರದ ಚರ್ಚ್ ಮುಂದಿನ ಮುಖ್ಯರಸ್ತೆ ರಾತ್ರಿಯೂ ಪ್ರವಾಹಾವೃತ ಆಗಿತ್ತು. ಒಂದೆಡೆ ರಾಜಕಾಲುವೆಗಳ ಭಕ್ಷಕರನ್ನು ರಕ್ಷಣೆ ಮಾಡುತ್ತಾ, ಇನ್ನೊಂದೆಡೆ ಸಾಂತ್ವನದ ನಾಟಕ ಆಡಿದರೆ ಗೊತ್ತಾಗುವುದಿಲ್ಲವೇ?
ಕಳೆದ 9 ವರ್ಷಗಳಿಂದ ಕೆ.ಆರ್.ಪುರ ಕ್ಷೇತ್ರಕ್ಕೆ ಅನುದಾನ ಹೊಳೆಯಂತೆ ಹರಿದಿದೆ. ಆ ಹಣವೆಲ್ಲ ಯಾವ ರಾಜಕಾಲುವೆಯ ಮೂಲಕ ಯಾರ ಜೇಬು ಸೇರಿತು? ಕಾಗದದ ಮೇಲಷ್ಟೇ ಕಾಮಗಾರಿಗಳ ಕರಡಿ ಕುಣಿತ ಕಾಣುತ್ತಿದೆ. ಆ ಹಣಕ್ಕೆ ಲೆಕ್ಕ ಎಲ್ಲಿ?
ನಮಗೆ ನಿಮ್ಮ ಪರಿಹಾರ ಬೇಡ, ರಾಜಕಾಲುವೆ ಸಮಸ್ಯೆ ಬಗೆಹರಿಸಿ ಎಂದು ಸ್ಥಳೀಯರು ಸಚಿವರಿಗೆ ಬೆಳಗ್ಗೆಯೇ ಮಂಗಳಾರತಿ ಮಾಡಿದ್ದಾರೆ. ಆ ಸಚಿವರಿಗೆ ಅನುದಾನದ ಮೇಲಿರುವ ಅಕ್ಕರೆ ಜನರ ಮೇಲೆ ಇಲ್ಲ. ಬೇಜವಾಬ್ದಾರಿ ಬಿಬಿಎಂಪಿಗೆ ನ್ಯಾಯಾಲಯ ಛೀಮಾರಿ ಹಾಕಿದರೂ, ಅದಕ್ಕೆ ನಾಚಿಕೆ ಇಲ್ಲ.
ಆಕ್ರೋಶಗೊಂಡ ಜನರು ಸಚಿವರಿಗೆ ಚಳಿ ಬಿಡಿಸಿದ್ದಾರೆ. ಅವರ ಜತೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಜನರಿಗೆ ಧಮ್ಕಿ ಹಾಕಿದ್ದಾರೆ. ಜನರ ಕೆಲಸ ಮಾಡದ ಸಚಿವರಿಗೆ ಇಂಥ ಧಿಮಾಕಿನ ಪ್ರವೃತ್ತಿ ಅಗತ್ಯವೇ? ಅಧಿಕಾರ ಕೊಟ್ಟ ಜನರ ಮುಂದೆಯೇ ಅಹಂಕಾರವೇ?
ಸಿನಿಮಾ ದೃಶ್ಯದಲ್ಲಿ ನಾಯಿ ಸತ್ತಿದ್ದಕ್ಕೆ ಕಣ್ಣೀರಿಟ್ಟ ಮುಖ್ಯಮಂತ್ರಿಗಳಿಗೆ ಈಗ ಕಣ್ಣೀರು ಬರುತ್ತಿಲ್ಲ, ಯಾಕೆ? ಮಳೆಯಿಂದ ಆಗುತ್ತಿರುವ ಪ್ರತಿ ಸಾವಿಗೂ ಸರಕಾರವೇ ನೇರ ಹೊಣೆ. ಮೊಸಳೆ ಕಣ್ಣೀರಿನ ಈ ಸೋಗಿನ ಸರಕಾರ ಸಾವಿನ ವ್ಯಾಪಾರ ಮಾಡುತ್ತಿದೆ.
ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಯುವಕ ಆಡಳಿತದ ಅಸಡ್ಡೆಗೆ ಬಲಿಯಾಗಿದ್ದಾನೆ. ರಾಜಕಾಲುವೆಗೆ ಬಲಿಯಾದ ಯುವಕನಿಗೆ ಸೂಕ್ತ ಪರಿಹಾರ ನೀಡಬೇಕು. ಸಿಲಿಕಾನ್ ಸಿಟಿ ಸುರಕ್ಷಿತವಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.
ಮುಖ್ಯಮಂತ್ರಿಗಳು ಇಡೀ ಕೆ.ಆರ್. ಪುರವನ್ನು ಸುತ್ತಿ, ಎಲ್ಲ ಸಮಸ್ಯೆಗಳಿಗೆ ತುರ್ತು ಪರಿಹಾರ ಕಂಡುಕೊಳ್ಳಬೇಕು. 9 ವರ್ಷದಿಂದ ಆ ಕ್ಷೆತ್ರಕ್ಕೆ ನೀಡಿರುವ ಅನುದಾನ, ಮತ್ತದರ ಬಳಕೆಯ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಎಚ್ ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಒಂದು ತಿಂಗಳ ಹಿಂದೆ ಸುರಿದ ಮಳೆಯಿಂದ ಕೆ.ಅರ್.ಪುರ ವಿಧಾನಸಭೆ ಕ್ಷೇತ್ರ ಸ್ವಿಮ್ಮಿಂಗ್ ಪೂಲ್ ಆಗಿತ್ತು. ಸಾಯಿ ಲೇಔಟ್ ನೀರಿನಲ್ಲಿ ತೇಲಿ ಬೆಂಗಳೂರಿನ ಹೆಗ್ಗಳಿಕೆಯನ್ನೇ ಅಣಕಿಸಿತ್ತು. ಇವತ್ತೂ ಅಂಥವೇ ದೃಶ್ಯಗಳು ಆ ಕ್ಷೇತ್ರದಲ್ಲಿ ಮರುಕಳಿಸಿವೆ. 1/11#ತೇಲುತ್ತಿದೆ_ಕೆಆರ್_ಪುರ pic.twitter.com/VWpKToZACt
— H D Kumaraswamy (@hd_kumaraswamy) June 18, 2022