ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೊಸದೊಂದು ಬಾಂಬ್ ಸಿಡಿಸಿರುವ ಮಾಜಿ ಶಿಕ್ಷಣ ಸಚಿವ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು, ಯಡಿಯೂರಪ್ಪ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯದ ಮುಂದಿನ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ.
ಹದಿನೈದು ದಿನಗಳ ಹಿಂದೆ ನನ್ನ ಜೊತೆ ಮಾತನಾಡಿದ್ದ ಯತ್ನಾಳ್ ನಾನೇ ಸಿಎಂ ಆಗುತ್ತೇನೆ ಅಂತ ಹೇಳಿದ್ದಾರೆ. ಹೈಕಮಾಂಡ್ ಕುಮ್ಮಕ್ಕು ಇಲ್ಲದೇ ಈ ಹೇಳಿಕೆ ನೀಡಲು ಹೇಗೆ ಸಾಧ್ಯ? ಬಿಎಸ್ ವೈ ನಂತರ ನಾನೇ ಸಿಎಂ ಎಂದು ಯತ್ನಾಳ್ ಬಾಯಿಯಿಂದ ಬಂದಿದೆ ಎಂದು ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ.
ರಾಜಕಾರಣ ಬಿಡಬೇಕೆಂದರೂ ಸಾಧ್ಯವಾಗಿಲ್ಲ:
ಇನ್ನು 3 ಪಕ್ಷಗಳು ಮತದಾರರಿಗೆ ಹಣ ಹಂಚುವ ಕೆಲಸ ಮಾಡುತ್ತಿದೆ. ಗೆದ್ದವರು ಅಧಿಕಾರ ನಡೆಸಿದರೆ, ಉಳಿದವರು ಟೋಪಿ ಹಾಕಿಸಿಕೊಂಡು ಮನೆಯಲ್ಲಿ ಕೂರುತ್ತಾರೆ ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೌಲ್ಯಾಧಾರಿತ ರಾಜಕಾರಣ ರಾಮಕೃಷ್ಣ ಹೆಗಡೆ ಅವರ ಹಿಂದೆಯೇ ಹೋಗಿದೆ. ನಾವೊಂದು ರೀತಿಯಲ್ಲಿ ಡ್ರಗ್ ಆಡಿಕ್ಟ್‌ಗಳಂತೆ ಆಗಿದ್ದೇವೆ. ರಾಜಕಾರಣವನ್ನು ಬಿಡಬೇಕೆಂದರೂ ಸಾಧ್ಯವಾಗ್ತಿಲ್ಲ ಎಂದು ಬಸವರಾಜ ಹೊರಟ್ಟಿ ಅವರು ಬೇಸರ ವ್ಯಕ್ತಪಡಿಸಿದರು.