ಹುಬ್ಬಳ್ಳಿ: ಪತ್ನಿಯ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮಾನಕ್ಕೆ ಹೆದರಿದ ಪತಿಯೊಬ್ಬ ಡೆತ್ನೋಟ್ ಬರೆದಿಟ್ಟು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ನಡೆದಿದೆ.
ಬೂದಪ್ಪ ಕೋರಿ (42) ಮೃತ ವ್ಯಕ್ತಿಯಾಗಿದ್ದು, ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟು, ನನ್ನ ಸಾವಿಗೆ ಪತ್ನಿ, ಪತ್ನಿಯ ಪ್ರೀಯಕರ ಕಾರಣ ಎಂದು ಆರೋಪಿಸಿದ್ದಾನೆ.
ಮೃತ ಬೂದಪ್ಪನ ಪತ್ನಿಯ ಹೆಸರು ಪಾರ್ವತಿ. ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದು, ಪತ್ನಿ ಪಾರ್ವತಿ ಕಳೆದ ಐದು ವರ್ಷಗಳಿಂದ ಹುಬ್ಬಳ್ಳಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇನ್ನು ಪತ್ನಿಯ ಅಕ್ರಮ ಸಂಬಂಧ ಶಂಕೆ ಹಿನ್ನೆಲೆ, ಆಕೆಯನ್ನು ಎರಡು ವರ್ಷಗಳ ಹಿಂದೆಯೇ ಬೂದಪ್ಪ ಕೆಲಸ ಬಿಡಿಸಿದ್ದ. ಇದಾದ ಬಳಿಕ ಇಬ್ಬರ ನಡುವೆ ಆಗಾಗ ಜಗಳ ನಡೆದಿದ್ದು, ಬೂದಪ್ಪನ ಪತ್ನಿ ತವರು ಮನೆ ಸೇರಿದ್ದಳು ಎನ್ನಲಾಗಿದೆ.
ಈ ಮಧ್ಯೆ ಪತ್ನಿ ಪಾರ್ವತಿ ಕುಟುಂಬವರು ಸಹ ಬೂದಪ್ಪನಿಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಇದರಿಂದ ಮನನೊಂದು ಬೂದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬೂದಪ್ಪ ಕುಟುಂಬಸ್ಥರು ಆರೋಪಿಸಿ ದೂರು ನೀಡಿದ್ದಾರೆ.
ಇನ್ನು, ಈ ವಿಚಾರ ತಿಳಿದು ಘಟನಾ ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.