ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪಂಚಮಸಾಲಿ ಸಮುದಾಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಹಿಂದುಳಿದ ಆಯೋಗಕ್ಕೆ ಸೂಚಿಸಿದ್ದಾರೆ.
ಸಮುದಾಯಕ್ಕೆ 2ಎ ಮೀಸಲಾತಿ ಕೊಡಿಸುವಂತೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಲಾಗಿದೆ. ಈ ನಡುವೆ ನಿನ್ನೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿದ್ದ ಸಿಎಂ, ಕೇಂದ್ರ ನಾಯಕರ ಅನುಮತಿ ಇಲ್ಲದೆ ಒಬ್ಬನೇ ನಿರ್ಧರಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಕೆಂಗಣ್ಣಿಗೆ ಗುರಿಯಾಗಿದ್ದರು.
ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ: ಕುರುಬರಲ್ಲಿ ಕಿಡಿಹೊತ್ತಿಸಿದೆ ಸಿಎಂ ನಡೆ:
ಇನ್ನು ಸಚಿವರ ನಿಯೋಗ ಕಳುಹಿಸಿಯೂ ಸದನದಲ್ಲಿ ವರಸೆ ಬದಲಿಸಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ, ಪಂಚಮಸಾಲಿ ಸಮುದಾಯದ ಕುಲಶಾಸ್ತ್ರ ಅಧ್ಯಯನಕ್ಕೆ ದಿಢೀರ್ ಆದೇಶಿಸಿದ್ದಾರೆ. ಆದರೆ ಮುಖ್ಯಮಂತ್ರಿಗಳ ಈ ನಡೆ ಕುರುಬರಲ್ಲಿ ಕಿಡಿಹೊತ್ತಿಸಿದೆ. ಹೌದು, ಸಿಎಂ ಲಿಂಗಾಯತ ಸಮುದಾಯದವರಾದ ಕಾರಣ ಸಿಎಂ ಸ್ಥಾನದಲ್ಲಿದ್ದರೂ ತಮ್ಮದೇ ಸಂಬಂಧಿತ ಸಮುದಾಯಕ್ಕೆ ಪ್ರಾಶಸ್ತ್ಯತೆ ಕೊಟ್ಟಿದ್ದಾರೆ.
ಈಗಾಗಲೆ ಕುರುಬ ಸಮುದಾಯದಿಂದ ಕಾಗಿನೆಲೆ ಪೀಠಾಧ್ಯಕ್ಷರಾದ ನಿರಂಜನಾನಂದ ಪುರಿ ಶ್ರೀಗಳ ನೇತೃತ್ವದಲ್ಲಿ ಕುರುಬ ಎಸ್ಟಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಈಗ ಸಿಎಂ ಪಂಚಮಸಾಲಿ ಸಮುದಾಯದ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶ ನೀಡಿದ್ದಾರೆ. ಹಾಗಾದರೆ ನಮ್ಮ ಹೋರಾಟ ಸಿಎಂಗೆ ಕಾಣಿಸಲಿಲ್ಲವೇ, ಒಂದು ಕಣ್ಣಿಗೆ ಸುಣ್ಣ, ಮತ್ತೊಂದಕ್ಕೆ ಬೆಣ್ಣೆಯೇ ಎಂದು ಕುರುಬ ಸಮುದಾಯದ ಮುಖಂಡರು ಪ್ರಶ್ನಿಸುತ್ತಿದ್ದಾರೆ.