ದಾವಣಗೆರೆ: ಕುರುಬ ಸಮುದಾಯವನ್ನು ಎಸ್ ಟಿ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಇಂದು ದಾವಣಗೆರೆಯಲ್ಲಿ ಕುರುಬರ ಎಸ್ ಟಿ ಹೋರಾಟ ಸಮಿತಿ ವತಿಯಿಂದ ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳ ನೇತೃತ್ವದಲ್ಲಿ ಬೃಹತ್ ಜಾಗೃತಿ ಸಮಾವೇಶ ನಡೆಯಲಿದೆ.
ದಾವಣಗೆರೆ ನಗರದ ಪಿಬಿ ರಸ್ತೆಯ ಬೀರಲಿಂಗೇಶ್ವರ ದೇವಾಲಯದ ಮೈದಾನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಬೃಹತ್ ಜಾಗೃತಿ ಸಮಾವೇಶ ನಡೆಯಲಿದ್ದು 25 ಸಾವಿರಕ್ಕೂ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ.
ಇನ್ನೂ ನಗರದ ಬೀರಲಿಂಗೇಶ್ವರ ದೇವಾಲಯದ ಮೈದಾನದಲ್ಲಿ ಈಗಾಗಲೇ ಸಮಾವೇಶಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳು, ಶಿವಾನಂದ ಸ್ವಾಮೀಜಿ, ಹೊಸದುರ್ಗಾ ಮಠದ ಈಶ್ವರಾನಂದ ಪುರಿ ಸ್ವಾಮಿ, ಸಿದ್ಧರಾಮಾನಂದ ಸ್ವಾಮಿ, ದಾವಣಗೆರೆ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್, ಸಚಿವ ಕೆ ಎಸ್ ಈಶ್ವರಪ್ಪ, ಎಚ್ ಎಂ ರೇವಣ್ಣ, ಬಂಡೆಪ್ಪ ಕಾಶೆಂಪುರ್, ಎಂಟಿಬಿ ನಾಗರಾಜ್, ಸೇರಿದಂತೆ ಹಲವು ಕ್ಷೇತ್ರದ ನಾಯಕರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಇನ್ನೂ ಕುರುಬ ಸಮುದಾಯದ ಎಸ್ ಟಿ ಮೀಸಲಾತಿ ಹೋರಾಟದ ತೀವ್ರತೆಯನ್ನು ಹೆಚ್ಚಿಸಲು, ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮಿಜಿಗಳ ನೇತೃತ್ವದಲ್ಲಿ ಜನವರಿ 15 ರಂದು ಪಾದಯಾತ್ರೆ ನಡೆಯಲಿದ್ದು, ಫೆಬ್ರುವರಿ 7 ರಂದು ಬೆಂಗಳೂರಿನಲ್ಲಿ ಕುರುಬ ಸಮುದಾಯದ ಬೃಹತ್ ಸಮಾವೇಶ ನಡೆಯಲಿದೆ ಎಂದು ಹೇಳಲಾಗಿದೆ.