ಏಷ್ಯಾಕಪ್ನ ಸೂಪರ್-4 ಹಂತದ ಇಂದಿನ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ ರೋಚಕ ಗೆಲುವು ಸಾಧಿಸಿದ್ದು, ಏಷ್ಯಾ ಕಪ್ ಟೂರ್ನಿಯಿಂದ ಟೀಂ ಇಂಡಿಯಾ ಬಹುತೇಕ ಹೊರಬಿದ್ದಿದೆ. ಫೈನಲ್ ಪ್ರವೇಶಿಸಬೇಕಾದರೆ ಇಂದಿನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಆದರೆ, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರೋಹಿತ್ ಬಳಗ ಸೋಲು ಕಂಡಿದೆ.
ಟೀಂ ಇಂಡಿಯಾ ನೀಡಿದ್ದ 174 ರನ್‌ಗಳ ಗುರಿ ಬೆನ್ನು ಹತ್ತಿದ ಶ್ರೀಲಂಕಾ 19.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್‌ಗಳಿಸಿ ಗೆಲುವಿನ ನಗೆ ಬೀರಿದ್ದು, ಭಾರತ ನಿರ್ಣಾಯಕ ಪಂದ್ಯದಲ್ಲಿ ಸೋಲು ಕಂಡಿದೆ. ಶ್ರೀಲಂಕಾ ಪರ ಕುಸಲ್ ಮೆಂಡಿಸ್-57, ನಿಸ್ಸಂಕ-52, ಭಾನುಕಾ ರಾಜಪಕ್ಸೆ 25, ನಾಯಕ ದಾಸುನ್ ಶನಕ 33 ರನ್‌ಗಳಿಸಿದರು. ಟೀಂ ಇಂಡಿಯಾ ಪರ ಚಹಲ್-3 ಹಾಗೂ ಆರ್. ಅಶ್ವಿನ್ 1 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ಆರಂಭಿಕ ಆಘಾತ ಹೊರತಾಗಿಯೂ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 72 ರನ್ ಹಾಗೂ ಸೂರ್ಯಕುಮಾರ್ 34 ರನ್ ಗಳಿಸುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದರು. ಇನ್ನು, ವಿರಾಟ್ ಕೊಹ್ಲಿ ಶೂನ್ಯ ಸುತ್ತಿದರೆ, ರಾಹುಲ್ 6, ಹಾರ್ದಿಕ್ ಪಾಂಡ್ಯ 17, ಪಂತ್ 17, ಅಶ್ವಿನ್ 15 ರನ್ ಗಳಿಸಿದರು. ಇನ್ನು, ಲಂಕಾ ಪರ ದಿಲ್ಶನ್ ಮಧುಶಂಕ 3, ಸಿ ಕರುಣಾರತ್ನ 2, ದಾಸುನ್ ಶನಕ 2 ವಿಕೆಟ್ ಪಡೆದರು.
ಇನ್ನು, ಶ್ರೀಲಂಕಾ ಪರ ಅದ್ಬುತ ಆಲ್ರೌಂಡರ್ ಪ್ರದರ್ಶನ ನೀಡಿದ ನಾಯಕ ದಾಸುನ್ ಶನಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.