ಜೆಡಿಎಸ್ ನ ಮತ್ತೊಬ್ಬ ಪ್ರಮುಖ ನಾಯಕ ಪಕ್ಷ ತೊರೆಯಲು ಮುಂದಾಗಿದ್ದಾರೆ. ಹೌದು, ಕನಕಪುರ ತಾಲೂಕಿನ ಡಿ.ಎಂ. ವಿಶ್ವನಾಥ್ ಜೆಡಿಎಸ್ ಪಕ್ಷದಿಂದ ಹೊರಗೆ ಕಾಲಿಟ್ಟಿದ್ದು, ಕನಕಪುರದಲ್ಲಿ ಭಾನುವಾರ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಹೌದು, ಶರವಣ ಸಮಾವೇಶಕ್ಕೆ 50 ಜನರನ್ನು ಕರೆದುಕೊಂಡು ಬರುತ್ತಾರೆ. ಅವರನ್ನು ಪರಿಷತ್ತಿಗೆ ಎರಡನೇ ಬಾರಿಗೆ ಆಯ್ಕೆ ಮಾಡಿದ್ದೀರಿ. ಜೆಡಿಎಸ್ ಇಂದು ಹಣ ಇದ್ದವರಿಗೆ ಮಾತ್ರ ಎಂಬಂತಾಗಿದೆ. ಕಳೆದ 25 ವರ್ಷದಿಂದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಇದುವರೆಗೂ ಕೂಡ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಹಣವಂತರ ಹಿಂದೆ ಬೀಳದಿದ್ದರೆ ಪಕ್ಷ ಇಂದೂ 100 ಸೀಟುಗಳನ್ನು ಗೆಲ್ಲುತ್ತಿತ್ತು ಎಂದು ವಿಶ್ವನಾಥ್ ದೂರಿದ್ದಾರೆ.
ಈ ವೇಳೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀವು ಅಧಿಕಾರ ಬಿಟ್ಟುಕೊಡಬೇಕಿತ್ತು. ಆದರೆ ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಬಾಲಕೃಷ್ಣ ಯಾರೇ ಹೇಳಿದರೂ ನೀವು ಕೇಳಲಿಲ್ಲ. ಸಿದ್ದರಾಮಯ್ಯ ಅವರಂಥ ದೊಡ್ಡ ನಾಯಕರು ಪಕ್ಷದಲ್ಲಿ ಇರಬೇಕಿತ್ತು ಎಂದು ಗುಡುಗಿದ್ದಾರೆ. ಇನ್ನು, ಡಿ.ಎಂ.ವಿಶ್ವನಾಥ್ 2008ರ ಎಂಎಲ್ಎ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದರು.