ಶಿರಸಿ: ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಮಾಜಿ ಸಂಸದ ಅನಂತಕುಮಾರ ಹೆಗಡೆ ಒಟ್ಟಾಗಿ ಕುಳಿತು ಆತ್ಮೀಯವಾಗಿ ಮಾತನಾಡುತ್ತಿರುವ ಫೋಟೋವನ್ನು ಹೆಬ್ಬಾರ್ ಅವರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರಿಗೆ ರಾಜಕೀಯವಾಗಿ ಪರಮ ವಿರೋಧಿಗಳಾಗಿರುವ ಶಿವರಾಮ ಹೆಬ್ಬಾರ್ ಹಾಗೂ ಅನಂತಕುಮಾರ ಹೆಗಡೆ ಅವರು ಈಗ ಇಷ್ಟೊಂದು ಆತ್ಮೀಯರಾಗಿರುವುದು ಬಿಜೆಪಿ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಶಿರಸಿಯಲ್ಲಿ ನೂತನ ಶಾಖೆ ಆರಂಭಿಸಿರುವ ದುರ್ಗಾದೇವಿ ಕೋ ಆಪರೇಟಿವ್ ಬ್ಯಾಂಕ್, ಕಾರವಾರದ ಮಾಜಿ ಶಾಸಕ ಆನಂದ ಅಸ್ನೋಟಿಕರ್ ತಾಯಿ ಶುಭಲತಾ ಅಸ್ನೋಟಿಕರ್ ಅವರ ಒಡೆತನಕ್ಕೆ ಸೇರಿದ್ದ ಸಹಕಾರಿ ಬ್ಯಾಂಕ್ ಆಗಿದ್ದು ಅದರ ಲೈಸನ್ಸ್‌ನ್ನು ಅನಂತಕುಮಾರ ಅವರಿಗೆ ಆನಂದ ವರ್ಗಾಯಿಸಿ ಕೊಟ್ಟಿದ್ದರು. ಹೀಗಾಗಿ ಅನಂತಕುಮಾರ ಅವರ ಕದಂಬ ಸಂಸ್ಥೆಯ ಅಡಿಯಲ್ಲಿಯೇ ಈ ಬ್ಯಾಂಕ್ ಆರಂಭವಾಗಿದೆ.
ಇತ್ತ ಶಿವರಾಮ್ ಹೆಬ್ಬಾರ್ ಅವರು ಸಹ ತಮ್ಮ ಪತ್ನಿಯ ಹೆಸರಿನಲ್ಲೂ ಒಂದು ಸಹಕಾರಿ ಬ್ಯಾಂಕ್ ಆರಂಭಿಸಿದ್ದಾರೆ. ಹೀಗೆ ಸಹಕಾರಿ ಕ್ಷೇತ್ರದಲ್ಲಿ ಒಬ್ಬರ ಜೊತೆ ಇನ್ನೊಬ್ಬರು ಸಾಗುತ್ತಿದ್ದರೆ ರಾಜಕಾರಣದಲ್ಲಿ ಈಗ ಬಿಜೆಪಿಯಲ್ಲಿ ಉಂಟಾಗಿರುವ ಪರಿಸ್ಥಿತಿಯಿಂದಾಗಿ ಇಬ್ಬರು ಕೈಜೋಡಿಸುವ ಪರಿಸ್ಥಿತಿ ಉಂಟಾಗಬಹುದು. ಹೀಗಾಗಿ ಪಕ್ಷದಿಂದ ದೂರವಿರುವ ಇಬ್ಬರು ಮುಖಂಡರ ದೋಸ್ತಿ ಕಾರ್ಯಕರ್ತರ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ್ದು, ಮುಂದಿನ ಬೆಳವಣಿಗೆಯತ್ತ ಎಲ್ಲರ ಚಿತ್ತ ನೆಟ್ಟಿದೆ.