ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿಯಲ್ಲಿ ಮಾತನಾಡಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ವಿರುದ್ಧ ಕಿಡಿಕಾರಿದ್ದಾರೆ.
ಅವನ್ಯಾರೋ ಹೊಸ ಆಹಾರ ಮಂತ್ರಿ ಬಂದಿದ್ದಾನೆ. ಅವನಿಗೆ ಸಾಮಾನ್ಯ ಜ್ಞಾನ ಇದೆಯೇ? ಟಿವಿ, ಫ್ರಿಡ್ಜ್ ಇದ್ದರೆ ಬಿಪಿಎಲ್ ಕಾರ್ಡ್ ಕೊಡಲ್ಲ ಅಂತಾನೆ. 2.5-3.5 ಸಾವಿರ ಕೊಟ್ಟರೆ ಟಿವಿ ಬರುತ್ತದೆ. ಟಿವಿ ಖರೀದಿಸುವುದಕ್ಕೂ ಇಎಂಐ ಕೊಡುತ್ತಾರೆ. ಟಿವಿ ತೆಗೆದುಕೊಂಡರೆ ಬಿಪಿಎಲ್ ನಿಲ್ಲಿಸುವುದೇ? ಯಾರಯ್ಯಾ ಅವನು? ಎಂದು ಉಮೇಶ್ ಕತ್ತಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.
ಮತ್ತೆ ಅಧಿಕಾರಕ್ಕೆ ಬಂದರೆ ಒಬ್ಬರಿಗೆ 10 ಕೆಜಿ ಅಕ್ಕಿ: ಸಿದ್ದರಾಮಯ್ಯ
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಸಚಿವ ಆರ್.ಶಂಕರ್ ಎದುರೇ ಮಾತನಾಡಿದ್ದು, ನನ್ನ ಅವಧಿಯಲ್ಲಿ ಒಬ್ಬರಿಗೆ 7 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಈಗ ಅದನ್ನು 3 ಕೆಜಿಗೆ ಇಳಿಸಿದ್ದಾರೆ. ಯಾಕೆ? ಎಂದು ಪ್ರಶ್ನಿಸಿದ್ದಾರೆ. ಯಾಕಪ್ಪಾ ಅಂದ್ರೆ ಕೊರೋನಾ ಸರ್ ಅಂತಾರೆ. ಕೊರೋನಾಗೂ, ಅಕ್ಕಿ ಕೊಡಲು ಸಂಬಂಧವೇನು? ಇನ್ನೆರಡು ವರ್ಷದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ಒಬ್ಬರಿಗೆ 10 ಕೆಜಿ ಪಡಿತರ ನೀಡುತ್ತೇವೆ. ಅದಕ್ಕಾಗಿ ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ. ನಮಗೆ ಹಣ ಮುಖ್ಯವಲ್ಲ ಎಂದು ಹೇಳಿದರು.