ಬೆಂಗಳೂರು: ಮೈಸೂರು ಜಿಲ್ಲೆಯ H.D ಕೋಟೆಯಲ್ಲಿ ಶಾಲೆಯೊಂದರ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಕೇಳಿಬಂದಿದೆ. ಈ ಬೆನ್ನಲ್ಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಿಕ್ಷಕರೊಬ್ಬರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವರದಿ ತಮ್ಮ ಗಮನಕ್ಕೆ ಬಂದಿದೆ. ಮತ್ತು ಸರ್ಕಾರ ಖಂಡಿತವಾಗಿಯೂ ಮಕ್ಕಳು ಮತ್ತು ಪೋಷಕರೊಂದಿಗೆ ನಿಲ್ಲುತ್ತದೆ ಎಂದು ಹೇಳಿದರು. ಲೈಂಗಿಕ ದೌರ್ಜನ್ಯದ ಪಿಡುಗನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿ ದಾಖಲಾದ ದೂರಿನ ಬಗ್ಗೆ ನಾನು ಪರಿಶೀಲನೆ ನಡೆಸುತ್ತೇನೆ. ತಾಲ್ಲೂಕಿನ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿಯನ್ನು (ಸಿ.ಡಿ.ಪಿ.ಒ) ವರದಿ ಪಡೆಯಲು ಪೊಲೀಸ್ ಠಾಣೆಗೆ ಕಳುಹಿಸಲಾಗುವುದು. ಈ ಸಂಬಂಧ ದೂರು ದಾಖಲಾಗಿದೆ. ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
H. D.ಕೋಟೆ ತಾಲ್ಲೂಕಿನ ಸ.ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ವಿರುದ್ಧ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದಾಗಿನಿಂದ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.