ಕೇರಳದ ಕೋಯಿಕೋಡ್ನ ಪೇಟ್ಟಮ್ಮಲ್ ನಲ್ಲಿ ಸಿಹಿತಿಂಡಿಗಳ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಆತ ಅಂಗಡಿಯಲ್ಲಿ ಸ್ವೀಟ್ ಡ್ರಗ್ ಹೆಸರಿನಲ್ಲಿ ಗಾಂಜಾ ಸ್ವೀಟ್‌ನ್ನು ಮಾರಾಟ ಮಾಡುತ್ತಿದ್ದ. ಅಂಗಡಿ ಮೇಲೆ ದಾಳಿ ನಡೆಸಿದ ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಗಾಂಜಾ ಬೆರೆಸಿದ 31 ಸಿಹಿತಿಂಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಂಗಡಿ ಮಾಲೀಕ ಆಕಾಶ್ ನನ್ನು ಬಂಧಿಸಲಾಗಿದೆ. ಆತ ಉತ್ತರ ಪ್ರದೇಶದವನು ಎಂದು ತಿಳಿದುಬಂದಿದೆ.
ವಶಪಡಿಸಿಕೊಂಡ ಪ್ರತಿ ಗಾಂಜಾ ಸಿಹಿತಿಂಡಿ 96 ಗ್ರಾಂ ತೂಕವಿದ್ದು ಒಂದು ಚಿಪ್ಪನ್ನು 30-50 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಯಾವುದೇ ಅನುಮಾನ ಬಾರದಂತೆ, ಗಾಂಜಾ ಸಿಹಿತಿಂಡಿಗಳನ್ನು ಶಾಲೆಗಳು ಮತ್ತು ಕಾಲೇಜುಗಳ ಬಳಿಯ ಸಣ್ಣ ಅಂಗಡಿಗಳಿಗೆ ಸರಬರಾಜು ಮಾಡಿ ಅಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದು ಮಾದಕವಸ್ತು ವ್ಯಸನಕ್ಕೆ ವಿದ್ಯಾರ್ಥಿಗಳನ್ನು ಸೆಳೆಯುವ ಮಾಫಿಯಾದ ಹೊಸ ತಂತ್ರವಾಗಿದೆ.
ಸಿಹಿತಿಂಡಿಯಲ್ಲಿ ಗಾಂಜಾವನ್ನು ಬೆರೆಸಿದ್ದರಿಂದ, ಈ ಸಿಹಿತಿಂಡಿ ಹೆಚ್ಚಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿತ್ತು. ಈ ಸಿಹಿತಿಂಡಿಯನ್ನು ಉತ್ತರಾಖಂಡದಿಂದ ಕೇರಳಕ್ಕೆ ತರಲಾಗಿತ್ತು. ಇವುಗಳನ್ನು ಕೇರಳದ ಹಲವಾರು ಅಂಗಡಿಗಳಿಗೆ ವಿತರಿಸಲಾಗಿರಬಹುದು ಶಂಕಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.