ಅಬುದಾಬಿ: ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಕೊಹ್ಲಿ ಪಡೆ 10 ಪಂದ್ಯಗಳಲ್ಲಿ 7 ರಲ್ಲಿ ಜಯಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಕೆಕೆಆರ್ ನೀಡಿದ್ದ 85 ರನ್ ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ 13.3 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 85 ರನ್ ಗಳಿಸಿ 8 ವಿಕೆಟ್ ಭರ್ಜರಿ ಜಯಭೇರಿ ಬಾರಿಸಿತು. ಆರ್ ಸಿಬಿ ಪರ ದೇವದತ್ ಪಡಿಕ್ಕಲ್-25, ಫಿಂಚ್ – 16, ಗುರುಕಿರತ್ ಸಿಂಗ್ – 21*, ಹಾಗು ನಾಯಕ ವಿರಾಟ್ ಕೊಹ್ಲಿ-18* ರನ್ ಗಳಿಸಿದರು. ಕೋಲ್ಕತಾ ಪರ ಫರ್ಗುಸನ್ 1 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆರ್ ಸಿಬಿ ಕಠಿಣ ಬೌಲಿಂಗ್ ದಾಳಿಗೆ ನಲುಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 85 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊಲ್ಕತ್ತಾ ಪರ ಟಾಮ್ ಬ್ಯಾಂಟಮ್-10, ನಾಯಕ ಇಯಾನ್ ಮಾರ್ಗನ್-30, ಕುಲದೀಪ್ ಯಾದವ್-12, ಫರ್ಗ್ಯೂಸನ್-19* ರನ್ ಗಳಿಸಿದರು. ಇನ್ನು ಆರ್ ಸಿಬಿ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಮಹಮದ್ ಸಿರಾಜ್ 3 ವಿಕೆಟ್, ಯಜುವೇಂದ್ರ ಚಾಹಲ್ 2 ವಿಕೆಟ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದು ತಂಡದ ಗೆಲಿವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅದ್ಬುತ ಬೌಲಿಂಗ್ (4-2-8-3) ಪ್ರದರ್ಶನ ನೀಡಿದ ಮಹಮ್ಮದ್ ಸಿರಾಜ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದನ್ನು ಓದಿ: ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದ ಶಿಖರ್ ದವನ್!
ಇದನ್ನು ಓದಿ: ವೈರಲ್: ಮದುವೆಯ ದಿನದಂದೇ ಬ್ಯಾಟ್ ಬೀಸಿದ ಆಟಗಾರ್ತಿ!