ಕಳಸ: ವಶಿಷ್ಠ ಆಶ್ರಮದಲ್ಲಿ ಭಾನುವಾರ (ಮಾರ್ಚ್ 16) ಮಧ್ಯಾಹ್ನ ಪ್ರವಾಸಕ್ಕೆ ಬಂದಿದ್ದ ಇಬ್ಬರು ರಾಜಸ್ಥಾನಿ ಯುವಕರು ಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ.
ಸಂಜೀವ ಮೆಟ್ಟಿಲಾದಲ್ಲಿನ ತೂಗು ಸೇತುವೆಯ ಬಳಿ ಈ ಘಟನೆ ನಡೆದಿದೆ. ಮೃತರನ್ನು ರಾಜಸ್ಥಾನದ ಜಗದೀಶ (33) ಮತ್ತು ಛೋಟಾ ಸಿಂಗ್ (28) ಎಂದು ಗುರುತಿಸಲಾಗಿದ್ದು, ಇಬ್ಬರೂ ಬೆಂಗಳೂರಿನಲ್ಲಿ ಚಿನ್ನದ ಕೆಲಸದಲ್ಲಿ ತೊಡಗಿದ್ದರು.
ಶನಿವಾರ ಹೋಳಿ ಹಬ್ಬದ ಪ್ರಯುಕ್ತ ಎರಡು ಕಾರುಗಳಲ್ಲಿ ಕಳಸಕ್ಕೆ ಬಂದಿದ್ದ 12 ಯುವಕರು ಕಲಸ ಸುತ್ತಮುತ್ತಲಿನ ಪ್ರವಾಸಿ ತಾಣಗಳಲ್ಲಿ ಸುತ್ತಾಡಿದ್ದರು. ಭಾನುವಾರ ಬೆಳಿಗ್ಗೆ ಬೆಂಗಳೂರಿಗೆ ಹಿಂದಿರುಗುವ ಮೊದಲು, ಅವರು ವಶಿಷ್ಠಾಶ್ರಮದಲ್ಲಿರುವ ತೂಗು ಸೇತುವೆಯನ್ನು ನೋಡಲು ಹೋಗಿದ್ದರು.
10 ಸ್ನೇಹಿತರು ತೂಗು ಸೇತುವೆಯನ್ನು ನೋಡಲು ಹೋದಾಗ, ಇಬ್ಬರು ಯುವಕರು ನೀರಿನಲ್ಲಿ ಈಜಲು ಕೆಳಗಿಳಿದರು. ಈಜು ಬಾರದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರ ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ಡೈವರ್ ಭಾಸ್ಕರ್ ನೆರವು ನೀಡಿದರು. ಕಳಸಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.