ದುಬೈ : ನಿನ್ನೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದ ಕೊನೆಯ ಓವರ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಎರಡು ರನ್ ಗಳಿಂದ ರೋಚಕ ಜಯಗಳಿದ್ದು, ಈ ಸೂಪರ್ ಗೆಲುವಿನ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ದಂಡಕ್ಕೆ ಗುರಿಯಾಗಿದ್ದಾರೆ.
ಹೌದು, ರಾಜಸ್ಥಾನ್ ರಾಯಲ್ಸ್ ತಂಡವು ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣ ನಾಯಕ ಸಂಜು ಸ್ಯಾಮ್ಸನ್ ಗೆ ದಂಡ ವಿಧಿಸಲಾಗಿದೆ. ಐಪಿಎಲ್ ನ ನೀತಿ ಸಂಹಿತೆ ಪ್ರಕಾರ ನಿಧಾನಗತಿಯ ಬೌಲಿಂಗ್ ಮಾಡಿದರೆ 12 ಲಕ್ಷ ರೂ.ದಂಡ ವಿಧಿಸಲಾಗುತ್ತದೆ. ಅದರಂತೆ ಪಂಜಾಬ್ ವಿರುದ್ದದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಪೂರ್ತಿಗೊಳಿಸಿದಕ್ಕೆ ನಾಯಕ ಸಂಜು ಸ್ಯಾಮ್ಸನ್ ಗೆ 12 ಲಕ್ಷ ರೂ. ದಂಡ ವಿಧಿಸಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ ನ ಹೊಸ ನೀತಿ ಸಂಹಿತೆ ಪ್ರಕಾರ 20 ಓವರ್ ಗಳನ್ನು 90 ನಿಮಿಷಗಳಲ್ಲಿ ಮುಗಿಸಬೇಕಾಗಿದ್ದು, ಇನಿಂಗ್ಸ್ ವೊಂದಕ್ಕೆ 90 ನಿಮಿಷಗಳನ್ನು ನಿಗದಿಪಡಿಸಲಾಗಿದ್ದು, ಒಂದು ಇನಿಂಗ್ಸ್ ಗೆ 1 ಗಂಟೆ 30 ನಿಮಿಷ ನೀಡಲಾಗುತ್ತಿದೆ. ಇನ್ನು, ಪಂದ್ಯದ ನಡುವೆ ಟೈಮ್-ಔಟ್ ಗಳಿಗಾಗಿ ತೆಗೆದುಕೊಂಡ ಸಮಯವನ್ನು ಕಳೆದು ಮೊದಲ ಒಂದು ಗಂಟೆಯೊಳಗೆ 14.11 ಓವರ್ ಗಳನ್ನು ಬೌಲ್ ಮಾಡಲೇಬೇಕು ಎಂಬ ಐಪಿಎಲ್ ನಲ್ಲಿ ನಿಯಮವಿದೆ. ಆದರೆ ಪಂಜಾಬ್ ಕಿಂಗ್ಸ್ ವಿರುದ್ದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಹೆಚ್ಚಿನ ಸಮಯ ತೆಗೆದುಕೊಂಡಿದ್ದು, ನಾಯಕ ಸಂಜು ಸ್ಯಾಮ್ಸನ್ ಗೆ ದಂಡ ವಿಧಿಸಲಾಗಿದೆ.