ಕಾರವಾರ: ಭಾರತೀಯ ನೌಕಾ ದಿನಾಚರಣೆಯ ಪ್ರಯುಕ್ತ ಕಾರವಾರದ ಐ.ಎನ್.ಎಸ್ ಕದಂಬ ನೌಕಾನೆಲೆಯ , ನೌಕಾದಳ ಭವನದ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿದ್ದರು.
1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಡಿ.4ರಂದು ಕರಾಚಿಯ ಬಂದರಿನ ಮೇಲೆ ದಾಳಿ ನಡೆಸಿ ಭಾರತವು ವಿಜಯ ಸಾಧಿಸಿದ ನೆನಪಿಗೆ ಭಾರತೀಯ ನೌಕಾದಿನ ಆಚರಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ನೌಕಾ ಸಿಬ್ಬಂದಿ ವಾದ್ಯ ಪರಿಕರಗಳಲ್ಲಿ ವಿವಿಧ ದೇಶಭಕ್ತಿ ಗೀತೆಗಳನ್ನು ನುಡಿಸಿದರು. ಬ್ಯಾಂಡ್ ಸಿಬ್ಬಂದಿ ಬೀಟಿಂಗ್ ರಿಟ್ರೀಟ್ ಮೂಲಕ ನೌಕಾಪಡೆಯ ಸಿಬ್ಬಂದಿಯ ತ್ಯಾಗ, ಬಲಿದಾನ ಮತ್ತು ಸಾಮರ್ಥ್ಯವನ್ನು ಸ್ಮರಿಸಿದರು. ನಂತರ ನೌಕಾಪಡೆಯ ಧ್ವಜದ ಅವರೋಹಣ ಮಾಡಲಾಯಿತು.
ಸಂಭ್ರಮಾಚರಣೆಯ ಭಾಗವಾಗಿ ನೌಕಾಪಡೆಯ ಐಎನ್‌ಎಸ್ ಮಕರ, ಐಎನ್‌ಎಸ್ ಸುವರ್ಣ, ಯಾರ್ಡ್ ಕ್ರಾಫ್ಟ್ ನೌಕೆಗಳಿಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ನೌಕೆಗಳಿಂದ ಸುಡುಮದ್ದುಗಳನ್ನು ಸಿಡಿಸಲಾಯಿತು.
ಅಗ್ನಿವೀರರು, ನೌಕಾಪಡೆಯ ಸಿಬ್ಬಂದಿ, ನೌಕಾನೆಲೆ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ವಿಜಯ ಕುಮಾರ್, ಕರ್ನಾಟಕ ನೌನೆಲೆಯ ಮುಖ್ಯಸ್ಥ ಫ್ಲ್ಯಾಗ್ ಕಮಾಂಡೆಂಟ್ ಆಫಿಸರ್ ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣನ್, ಕ್ಯಾಪ್ಟನ್ ಬೀರೇಂದ್ರ ಎಸ್.ಬೈನ್ಸ್, ಕಾರವಾರ ಉಪವಿಭಾಗಾಧಿಕಾರಿ ಕನಿಷ್ಕ ಹಾಗೂ ನೌಕಾಪಡೆಯ ಅಧಿಕಾರಿಗಳು ಮತ್ತಿತರರು ಇದ್ದರು.