ಕೈಯಲ್ಲಿರುವ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ಅದಕ್ಕೆ ನಿಮಗೆ ಷೇರು ಮಾರುಕಟ್ಟೆ, ಸಣ್ಣ ಉಳಿತಾಯ ಯೋಜನೆಗಳು, ಬ್ಯಾಂಕುಗಳು ಹೀಗೆ ಸಾಕಷ್ಟು ಆಯ್ಕೆಗಳಿದ್ದು, ನೀವು ಎಲ್ಲಿ ಬೇಕಾದರೂ ಹಣವನ್ನು ಹೂಡಿಕೆ ಮಾಡಬಹುದು. ನೀವು ಅಪಾಯವಿಲ್ಲದೆ ನಿರ್ದಿಷ್ಟ ಲಾಭವನ್ನು ಪಡೆಯಲು ಬಯಸಿದರೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.
ಪೋಸ್ಟ್ ಆಫೀಸ್ ವಿವಿಧ ಸಣ್ಣ ಉಳಿತಾಯ ಯೋಜನೆಗಳನ್ನು ನೀಡುತ್ತದೆ. ಇವುಗಳಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ದುಪ್ಪಟ್ಟು ಹಣ ಸಿಗುತ್ತದೆ. ನೀವು ದೀರ್ಘಾವಧಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸಿದರೆ, ಈ ಯೋಜನೆಗೆ ಸೇರಿ. ಈ ಯೋಜನೆಯಡಿಯಲ್ಲಿ ನಿಮ್ಮ ಹಣಕ್ಕೆ ಶೇಕಡಾ 6.9 ರಷ್ಟು ಬಡ್ಡಿ ಸಿಗುತ್ತದೆ.
ಬಡ್ಡಿದರವು ಪ್ರತಿ ಮೂರು ತಿಂಗಳಿಗೊಮ್ಮೆ ಬದಲಾಗಬಹುದು. ಕೇಂದ್ರ ಸರ್ಕಾರ ತ್ರೈಮಾಸಿಕ ಆಧಾರದ ಮೇಲೆ ಬಡ್ಡಿದರಗಳನ್ನು ಪರಿಶೀಲಿಸುತ್ತಿದೆ. ಆದ್ದರಿಂದ ದರಗಳಲ್ಲಿ ಬದಲಾವಣೆ ಆಗಬಹುದು ಅಥವಾ ಸ್ಥಿರವಾಗಿ ಮುಂದುವರಿಯಬಹುದು. ನೀವು ಪೋಸ್ಟ್ ಆಫೀಸ್ ನ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 124 ತಿಂಗಳಲ್ಲಿ ನಿಮ್ಮ ಹಣವು ದ್ವಿಗುಣಗೊಳ್ಳುತ್ತದೆ.
ನೀವು ಕನಿಷ್ಠ ರೂ.1000 ಹೂಡಿಕೆ ಮಾಡಬಹುದಾಗಿದ್ದು, ಯಾವುದೇ ಗರಿಷ್ಠ ಮಿತಿಯಿಲ್ಲ. ಕನಿಷ್ಠ 18 ವರ್ಷ ವಯಸ್ಸಿನವರು ಈ ಯೋಜನೆಗೆ ಸೇರಲು ಅರ್ಹರು. ಕಿಸಾನ್ ವಿಕಾಸ್ ಪತ್ರಗಳನ್ನು ನೀವು ಇಷ್ಟಪಡುವ ಯಾವುದೇ ಮೊತ್ತದಲ್ಲಿ 1000, 5 ಸಾವಿರ, 10 ಸಾವಿರ, 50 ಸಾವಿರ ರೂಗಳಲ್ಲಿ ಖರೀದಿಸಿ. ಉದಾಹರಣೆಗೆ, ನೀವು 1 ಲಕ್ಷ ರೂ.ಗಳನ್ನು ಹಾಕಿದರೆ, ಮೆಚ್ಯೂರಿಟಿ ಸಮಯದಲ್ಲಿ ನಿಮಗೆ 2 ಲಕ್ಷ ರೂ.ಸಿಗುತ್ತದೆ.