ಪುಣೆ: ಪುಣೆ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಎಂಟು ತಂಡಗಳನ್ನು ರಚಿಸಿದ್ದು, ಕಣ್ಗಾವಲು ದೃಶ್ಯಾವಳಿಗಳ ಸಹಾಯದಿಂದ ಆರೋಪಿಯನ್ನು ದತ್ತಾತ್ರೇಯ ರಾಮದಾಸ್ (36) ಎಂದು ಗುರುತಿಸಲಾಗಿದ್ದು, ಆರೋಪಿ ಪತ್ತೆಗೆ 1 ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡಿದ್ದಾರೆ.
ಅಪರಾಧ ಹಿನ್ನಲೆಯನ್ನು ಹೊಂದಿರುವ ಆರೋಪಿ, ಪುಣೆಯ ಜನನಿಬಿಡ ಸ್ವರ್ಗೆಟ್ ಬಸ್ ನಿಲ್ದಾಣದ ಮಧ್ಯದಲ್ಲಿ ಮತ್ತು ಪೊಲೀಸ್ ಠಾಣೆಯಿಂದ ಸುಮಾರು 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಪ್ರತ್ಯೇಕ ಬಸ್ ಹತ್ತುವಂತೆ ಒತ್ತಾಯಿಸುವ ಮೂಲಕ 26 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪೊಲೀಸರು ಈಗ ಆರೋಪಿಗಳ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಮಂಗಳವಾರ ಮುಂಜಾನೆ 5.30ರ ಸುಮಾರಿಗೆ ಆಕೆ ತನ್ನ ಮನೆಗೆ ಮರಳಲು ಬಸ್ಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ.
ಒಬ್ಬ ಉದ್ಯೋಗಿ ಮಹಿಳೆ ತನ್ನ ಮನೆಗೆ ಮರಳಲು ಬಸ್ಸಿಗಾಗಿ ಕಾಯುತ್ತಿದ್ದಳು. ಒಬ್ಬ ವ್ಯಕ್ತಿಯು ಬಂದು ನಿಮ್ಮ ಮನೆಗೆ ಹೋಗುವ ಬಸ್ ಬೇರೆ ಎಲ್ಲೋ ನಿಲ್ಲಿಸಲಾಗಿದೆ ಎಂದು ಹೇಳಿ ಮಹಿಳೆಯನ್ನು ಅಲ್ಲಿ ನಿಲ್ಲಿಸಿದ್ದ ಬಸ್ಗೆ ಕರೆದೊಯ್ದು, ನಂತರ, ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಕುರಿತು ದೂರು ದಾಖಲಾಗಿದೆ. ನಾವು ಆರೋಪಿಯನ್ನು ಗುರುತಿಸಿದ್ದೇವೆ ಮತ್ತು ಆತನನ್ನು ಬಂಧಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಸಂತ್ರಸ್ತೆಯ ಆರೋಗ್ಯ ಸ್ಥಿರವಾಗಿದೆ ಎಂದು ವಲಯ 2ರ ಡಿಸಿಪಿ ಸ್ಮಾರ್ತನಾ ಪಾಟೀಲ್ ತಿಳಿಸಿದ್ದಾರೆ.