ಬಳ್ಳಾರಿ: ಅರ್ಥಿಕವಾಗಿ ಸಬಲರಾಗಿರುವವರು ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದ್ದು, ಅನಧಿಕೃತವಾಗಿ ಪಡೆದುಕೊಂಡಿರುವ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಸ್ವಯಂಪ್ರೇರಿತವಾಗಿ 15 ದಿನಗೊಳಗೆ ಇಲಾಖೆಗೆ ಹಿಂದಿರುಗಿಸಬೇಕು. ಇಲ್ಲದಿದ್ದಲ್ಲಿ ಅಂತವರನ್ನು ಗುರುತಿಸಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಹಾಗೂ ದಂಡವಸೂಲಿ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ್ ಅವರು ಎಚ್ಚರಿಕೆ ನೀಡಿದ್ದಾರೆ.
ಪಡಿತರ ಮೇಲಿನ ವೆಚ್ಚ ತಗ್ಗಿಸಲು ಹಾಗೂ ಆಹಾರ ಭದ್ರತಾ ಕಾಯ್ದೆ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಪಡಿತರ ಚೀಟಿಗಳನ್ನು ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ. ಸುಳ್ಳು ದಾಖಲೆ ನೀಡಿ ಬಿ.ಪಿ.ಎಲ್ ಕಾರ್ಡುಗಳನ್ನು ಪಡೆದಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಮತ್ತು ಈವರೆಗೆ ಪಡೆದಿರುವ ಅಕ್ಕಿ ಮತ್ತು ಇತರ ಪಡಿತರ ಪದಾರ್ಥಗಳನ್ನು ಮುಕ್ತ ಮಾರುಕಟ್ಟೆಯ ದರದ ಅಂದಾಜು ಮೌಲ್ಯಕ್ಕೆ ಲೆಕ್ಕ ಮಾಡಿ ದಂಡ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಆರ್ಥಿಕವಾಗಿ ದುರ್ಬಲರಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿ.ಪಿ.ಎಲ್ ಪಡಿತರವನ್ನು ಆರ್ಥಿಕವಾಗಿ ಸದೃಢವಾಗಿರುವ ಕೆಲವು ಕುಟುಂಬಗಳು ಪಡೆದಿರುವುದು ತನಿಖಾ ಸಮಯದಲ್ಲಿ ಕಂಡು ಬಂದಿದೆ. ಇಲಾಖೆಯ ಮಾನದಂಡಗಳನ್ನು ಮರೆಮಾಚಿ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಕ್ರಮ ಪಡಿತರ ಚೀಟಿ ಹೊಂದಿರುವ ಪಡಿತರ ಕಾರ್ಡುದಾರರು ಆಧಾರ್ ಹಾಗೂ ಮೊಬೈಲ್ ನಂಬರ್‍ಗಳನ್ನು ಪಡಿತರ ಚೀಟಿಗೆ ಲಿಂಕ್ ಮಾಡಿರುವ ಸಂದರ್ಭದಲ್ಲಿ ಸಾಕಷ್ಟು ಅನರ್ಹ ಪಡಿತರ ಚೀಟಿಗಳು ಕಂಡು ಬಂದಿವೆ. ಸರ್ಕಾರಿ ನೌಕರರು,ಅನುದಾನಿತ ಸರ್ಕಾರಿ ನೌಕರರು, 4 ಚಕ್ರ ವಾಹನ ಹೊಂದಿರುವವರನ್ನು ಪತ್ತೆಹಚ್ಚಲಾಗಿದ್ದು, ಈ ಬಗ್ಗೆ ಅನೇಕ ಬಾರಿ ಅಂತಹ ಕಾರ್ಡುಗಳನ್ನು ಹಿಂದಿರುಗಿಸಲು ಅವಕಾಶ ಕಲ್ಪಿಸಿದ್ದರೂ ಶೇ.50 ರಿಂದ 55 ರಷ್ಟು ಜನ ಮಾತ್ರ ಕಾರ್ಡುನ್ನು ವಾಪಸ್ಸು ನೀಡಿದ್ದು, ಉಳಿದವರಿಗೆ ಮತ್ತೊಂದು ಕೊನೆಯ ಅವಕಾಶ ನೀಡಲು ಇಲಾಖೆ ತೀರ್ಮಾನಿಸಿದೆ. ಹಿಂದಿರುಗಿಸದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.