ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆಗೊಂಡ ಹೋಂ ಸ್ಟೇ, ಹೋಟೆಲ್/ರೆಸಾರ್ಟ್‌ನ್ನು ನಡೆಸುತ್ತಿರುವ ಮಾಲೀಕರು ಪ್ರವಾಸೋದ್ಯಮ ಇಲಾಖೆಯಿಂದ ಹೋಂಸ್ಟೇ ನಡೆಸಲು ಮಾತ್ರ ಅನುಮತಿಯನ್ನು ನೀಡಲಾಗಿದ್ದು, ಇತರೆ ಕ್ರೀಡೆಗಳಿಗೆ ಅವಕಾಶವನ್ನು ಮಾಡಿಕೊಟ್ಟಿರುವುದಿಲ್ಲ. ಹೀಗಾಗಿ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಮಾಲೀಕರುಗಳೇ ಜವಾಬ್ದಾರಿ ಎಂದು ಪ್ರವಾಸೋದ್ಯಮ ಇಲಾಖೆ ಎಚ್ಚರಿಸಿದೆ.
ಆದ್ದರಿಂದ ಹೋಂ ಸ್ಟೇಯಲ್ಲಿ ಇನ್ನಿತರೆ ಚಟುವಟಿಕೆಗಳು ಅಂದರೆ ಜಿಪ್ ಲೈನ್, ಬೋಟಿಂಗ್, ಜಾರ್ಬಿಂಗ್, ಕಯಾಕಿಂಗ್, ಸ್ವಿಮ್ಮಿಂಗ್ ರೋಪ್ ಗೇಮ್ಸ್, ಆರ್ಚರಿ, ಡಾರ್ಟ್ ಬೋರ್ಡ್ ಹಾಗೂ ಇನ್ನಿತರೆ ಚಟುವಟಿಕೆಗಳನ್ನು ನಡೆಸುತ್ತಿದ್ದಲ್ಲಿ ಈ ಕೂಡಲೇ ಪ್ರವಾಸೋದ್ಯಮ ಇಲಾಖೆ ಕಾರವಾರ ಉತ್ತರಕನ್ನಡ ಜಿಲ್ಲೆರವರಿಗೆ ಮಾಹಿತಿ ನೀಡಬೇಕಾಗಿದ್ದು, ಸದರಿ ಚಟುವಟಿಕೆ ನಡೆಸಲು ಪೂರಕ ದಾಖಲೆಗಳನ್ನು ಸಲ್ಲಿಸಿ ಕೂಡಲೇ ಅನುಮತಿಯನ್ನು ಪಡೆಯಬೇಕು. ಅನುಮತಿ ಪಡೆಯದೇ ಇರುವುದರ ಬಗ್ಗೆ ಮಾಹಿತಿ ಕಂಡುಬಂದಲ್ಲಿ ಹೋಂಸ್ಟೇಗಳ ಸ್ಥಳ ತಪಾಸಣೆ ನಡೆಸಿ ಅನುಮತಿ ಪತ್ರವನ್ನು ರದ್ದುಗೊಳಿಸಲಾಗುವುದು ಹಾಗೂ ಕಾನೂನು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಹೋಂ ಸ್ಟೇ, ಹೋಟೆಲ್/ರೆಸಾರ್ಟ್ಗಳಲ್ಲಿ ಜೀಪ್ ಲೈನ್, ಬೋಟಿಂಗ್, ಜಾರ್ಬಿಂಗ್, ಕಯಾಕಿಂಗ್, ಸ್ಟ್ರೀಮ್ಮಿಂಗ್ ರೋಪ್ ಗೇಮ್ಸ್, ಆರ್ಚರಿ, ಡಾರ್ಟ ಬೋರ್ಡ ಹಾಗೂ ಇನ್ನಿತರ ಚಟುವಟಿಕೆಗಳನ್ನು ಪ್ರವಾಸಿಗರ /ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಬೇಕಾಗುವ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡು ತಮ್ಮ ಸಿಬ್ಬಂದಿಗಳ ನೇತೃತ್ವದಲ್ಲಿ ನಡೆಸಬೇಕು. ಸದರಿ ಈ ವಿಷಯದ ಕುರಿತು ನಿಷ್ಕಾಳಜಿಯನ್ನು ತೋರಿ ಯಾವುದೇ ಅವಘಡಗಳು ನಡೆದಿರುವುದು ಕಂಡುಬಂದಲ್ಲಿ ಸದರಿ ಅವಘಡಕ್ಕೆ ಹೊಂಸ್ಟೇ, ಹೋಟೆಲ್/ರೆಸಾರ್ಟ್ ಮಾಲೀಕರೆ ಜವಾಬ್ದಾರರಾಗಿದ್ದು ಸದರಿರವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಅನೇಕ ಮಾಲೀಕರ ಬಳಿ ಪ್ರವಾಸೋದ್ಯಮ ಇಲಾಖೆಯ ನಿಯಮಾವಳಿಗಳ ಅನುಸಾರ ನೊಂದಣಿ ಮಾಡಲು ಸರಿಯಾದ ದಾಖಲೆಗಳು ಲಭ್ಯವಿಲ್ಲದೆ ಪಂಚಾಯಿತಿಯಿಂದ ನಿರಾಪೇಕ್ಷಣಾ ಪ್ರಮಾಣ ಪತ್ರ ಹಾಗೂ ಪೋಲಿಸ್ ಇಲಾಖೆಯ ನಿರಾಪೇಕ್ಷಣಾ ಪ್ರಮಾಣದೊಂದಿಗೆ ನಡೆಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಹೋಂ ಸ್ಟೇಗಳಿಂದಾಗಿ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯದಿದ್ದಲ್ಲಿ ಈ ಕೂಡಲೆ ಹೋಟೆಲ್/ರೆಸಾರ್ಟ್ಗಳನ್ನು ಆನ್‌ಲೈನ್ kttf.karnatakatourism.org ಮೂಲಕ ಅಗತ್ಯ ದಾಖಲೆಗಳನ್ನು ನೀಡಿ ಪ್ರವಾಸೋದ್ಯಮ ಇಲಾಖೆಯಡಿ ಅಥವಾ ಕೇಂದ್ರ ಸರ್ಕಾರದ Breakfast (https://tourism.gov.in) ಅಡಿಯಲ್ಲಿ ನೊಂದಣಿ ಮಾಡಿಕೊಳ್ಳಬೇಕು.
ಈ ಸುದ್ದಿ ಪ್ರಕಟಣೆಗೊಂಡ ಮುಂದಿನ 15 ದಿನಗಳೊಳಗೆ ನೊಂದಣಿ ಮಾಡದೆ ಅನಧಿಕೃತವಾಗಿ ನಡೆಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ಉತ್ತರ ಕನ್ನಡ ಜಿಲ್ಲೆ ಕಾರವಾರರವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದೆಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.