ನವದೆಹಲಿ: ರಾಷ್ಟ್ರ ರಾಜಧಾನಿಯ ನಿವಾಸಿಗಳು ದೀಪಾವಳಿ ಹಬ್ಬದ ಸಂದರ್ಭದ 15 ದಿನಗಳ ಅವಧಿಯಲ್ಲಿ 3.87 ಕೋಟಿ ಮದ್ಯದ ಬಾಟಲಿಗಳನ್ನು ಖರೀದಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮಾರಾಟದಿಂದ ದೆಹಲಿ ಸರ್ಕಾರದ ಅಬಕಾರಿ ಇಲಾಖೆಗೆ 447.62 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ 15 ರಿಂದ ಅಕ್ಟೋಬರ್ 30 ರವರೆಗೆ, ದೆಹಲಿ ಸರ್ಕಾರದ ನಾಲ್ಕು ಕಾರ್ಪೊರೇಷನ್‌ಗಳು ನಡೆಸುತ್ತಿರುವ ಮಳಿಗೆಗಳಿಂದ 3.87 ಕೋಟಿ ಮದ್ಯದ ಬಾಟಲಿಗಳು ಮಾರಾಟವಾಗಿವೆ. ಇದರಲ್ಲಿ 2.98 ಕೋಟಿ ಭಾರತೀಯ ನಿರ್ಮಿತ ವಿದೇಶಿ ಮದ್ಯ (IMFL) ಮತ್ತು 89.48 ಲಕ್ಷ ಬಿಯರ್ ಬಾಟಲಿಗಳು ಸೇರಿವೆ ಎಂದು ಅಧಿಕೃತ ಅಂಕಿ ಅಂಶಗಳಿಂದ ತಿಳಿದುಬಂದಿದೆ.
ದೀಪಾವಳಿಯ ಹಿನ್ನಲೆ ಅಕ್ಟೋಬರ್ 31 ರಂದು ‘ಡ್ರೈ ಡೇ’ ಆಗಿ ಘೋಷಿಸಿದ್ದು, ಅಂದು ನಗರದಾದ್ಯಂತ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು. ಆದರೆ, ದೀಪಾವಳಿಯ ಮುನ್ನಾ ದಿನದಂದು, ಒಟ್ಟು 33.80 ಲಕ್ಷ ಬಾಟಲ್ ಮದ್ಯವನ್ನು ಮಾರಾಟ ಮಾಡಲಾಗಿದ್ದು, 61.56 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೀಪಾವಳಿಯ ಹದಿನೈದು ದಿನಗಳಲ್ಲಿ 1.18 ಕೋಟಿ ಅಧಿಕ ಬಾಟಲಿಗಳು ಮಾರಾಟವಾಗಿವೆ. 2023ರಲ್ಲಿ 2.69 ಕೋಟಿ ಮದ್ಯದ ಬಾಟಲಿಗಳು ಮಾರಾಟವಾಗಿದ್ದವು.
2021-22ರ ಮದ್ಯಪಾನ ನೀತಿಯನ್ನು ಹಿಂತೆಗೆದುಕೊಂಡ ಕಾರಣ ಉಂಟಾದ ಅಡಚಣೆಗಳು ಸರ್ಕಾರಕ್ಕೆ ಆದಾಯದ ಮೇಲೆ ತೀವ್ರ ನಷ್ಟ ಉಂಟುಮಾಡಿದ್ದವು. ಅಬಕಾರಿ ಇಲಾಖೆಯು ಏಪ್ರಿಲ್-ಅಕ್ಟೋಬರ್ 2024ರ ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ರೂ 3,047 ಕೋಟಿ ಆದಾಯವನ್ನು ಗಳಿಸಿದೆ. ಇದು 2023ರ ಇದೇ ಅವಧಿಗೆ ಹೋಲಿಸಿದರೆ ಸುಮಾರು 7 ಶೇಕಡಾ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,849 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ ಮತ್ತು ಅಕ್ಟೋಬರ್ 2024ರ ನಡುವೆ ವ್ಯಾಟ್ ಸೇರಿದಂತೆ ಒಟ್ಟು ಅಬಕಾರಿ ಆದಾಯವು ಹಿಂದಿನ ವರ್ಷದ ಇದೇ ಅವಧಿಯಲ್ಲಿ 4,188 ಕೋಟಿ ರೂಪಾಯಿಗಳಾಗಿದ್ದು, ಈ ಬಾರಿ 4,495 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.