ಅಟಲ್ ಪೆನ್ಷನ್ ಯೋಜನೆ(APY)ಗೆ ಆದಾಯ ತೆರಿಗೆ ಪಾವತಿದಾರರು ಅ.1ರಿಂದ ಅನರ್ಹರಾಗಲಿದ್ದಾರೆಂದು ಕೇಂದ್ರ ವಿತ್ತ ಸಚಿವಾಲಯ ಪ್ರಕಟಿಸಿದ್ದು, ಈ ನಿಗದಿತ ದಿನಾಂಕಕ್ಕೂ ಮೊದಲೇ ಯೋಜನೆಗೆ ಸೇರಿದ್ದರೆ, ಅಂಥವರಿಗೆ ಈ ನಿಯಮ ಅನ್ವಯವಾಗಲ್ಲ ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.
18-40 ವರ್ಷದೊಳಗಿನವರು ಅಟಲ್ ಪೆನ್ಷನ್ ಯೋಜನೆಯ ಫಲಾನುಭವಿಗಳಾಗಬಹುದಾಗಿದ್ದು, ತಿಂಗಳಿಗೆ 100 ರೂ ಕಟ್ಟಿದಲ್ಲಿ 60 ವರ್ಷ ದಾಟಿದ ಬಳಿಕ ಅವರು ಪಾವತಿಸಿದ ಮೊತ್ತದ ಆಧಾರದ ಮೇರೆಗೆ 1000 ರೂನಿಂದ 5,000 ರೂವರೆಗೆ ಪಿಂಚಿಣಿ ದೊರೆಯಲಿದೆ.
ಏನಿದು ಅಟಲ್ ಪಿಂಚಣಿ ಯೋಜನೆಯ ಹೊಸ ನಿಯಮ?
ದೇಶದಲ್ಲಿನ ಅಸಂಘಟಿತ ಕಾರ್ಮಿಕರ ಜೀವನೋಪಾಯಕ್ಕಾಗಿ ಸರ್ಕಾರವು 2015ರಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಹೊಸ ನಿಯಮವನ್ನು ತಂದಿದ್ದು, ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.
ಈ ನಿಯಮದ ಪ್ರಕಾರ ಆದಾಯ ತೆರಿಗೆ ಪಾವತಿದಾರರು ಅಟಲ್ ಪಿಂಚಣಿ ಯೋಜನೆಯ ಖಾತೆ ತೆರೆಯುವ ಅರ್ಹತೆಯನ್ನು ಹೊಂದಿರುವುದಿಲ್ಲ. ಅ.1ರಿಂದ ಅಥವಾ ಅದರ ಬಳಿಕ ಅಟಲ್ ಪಿಂಚಣಿ ಯೋಜನೆಯ ಚಂದಾದಾರಿಕೆ ಮಾಡಿಕೊಂಡವರ ಖಾತೆಯನ್ನು ಮುಚ್ಚಲಾಗುತ್ತದೆ ಎಂದು ತಿಳಿಸಿದೆ.