Annabhagya Yojana | ರಾಜ್ಯ ಸರ್ಕಾರವು ಜನಪರ ಯೋಜನೆಗಳ ಪೈಕಿ ಪ್ರಮುಖವಾದ ಅನ್ನಭಾಗ್ಯ ಯೋಜನೆಗೆ ಮಹತ್ವದ ಬದಲಾವಣೆ ತಂದಿದೆ. ಸರ್ಕಾರವು ಇದೀಗ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ‘ಇಂದಿರಾ ಆಹಾರ ಕಿಟ್’ ನೀಡಲು ತೀರ್ಮಾನಿಸಿದೆ. ಈ ನಿರ್ಧಾರಕ್ಕೆ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಅನುಮೋದನೆ ದೊರೆತಿದೆ.
ಹೊಸ ಯೋಜನೆಯ ಉದ್ದೇಶ
ಹೆಚ್ಚುವರಿ ಅಕ್ಕಿಯ ದುರ್ಬಳಕೆಯನ್ನು ತಡೆಹಿಡಿಯುವ ಉದ್ದೇಶದಿಂದ, ಸರ್ಕಾರವು ಪೌಷ್ಟಿಕ ಆಹಾರವನ್ನು ಉತ್ತೇಜಿಸುವ ಕ್ರಮವಾಗಿ ಈ ಬದಲಾವಣೆ ಮಾಡಿದೆ. ಹಿಂದಿನಂತೆ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ 5 ಕೆಜಿ ಅಕ್ಕಿ ಸಿಗುತ್ತಲೇ ಇರುತ್ತದೆ. ಆದರೆ, ಅದರ ಜೊತೆಗೆ ಒಂದು ಪೌಷ್ಟಿಕ ಆಹಾರ ಕಿಟ್ ಕುಟುಂಬಕ್ಕೆ ನೀಡಲಾಗುತ್ತದೆ.
ಇಂದಿರಾ ಆಹಾರ ಕಿಟ್‌ನಲ್ಲಿ ಏನಿದೆ?
ಸಚಿವ ಹೆಚ್.ಕೆ. ಪಾಟೀಲ್ ಅವರ ಮಾಹಿತಿ ಪ್ರಕಾರ, ಈ ಕಿಟ್‌ನಲ್ಲಿ ಕೆಳಗಿನ ದಿನಸಿ ವಸ್ತುಗಳು ಇರಲಿವೆ: ತೊಗರಿಬೇಳೆ – 2 ಕೆ.ಜಿ, ಅಡುಗೆ ಎಣ್ಣೆ-1ಕೆ.ಜಿ, ಸಕ್ಕರೆ – 1ಕೆ.ಜಿ, ಉಪ್ಪು – 1 ಕೆ.ಜಿ ಈ ಕಿಟ್ ವಿತರಣೆಗಾಗಿ ರಾಜ್ಯ ಸರ್ಕಾರವು ₹61.19 ಕೋಟಿ ರೂ.ವೆಚ್ಚ ಮಾಡಲಿದೆ.
ಕುಟುಂಬಗಳಿಗೆ ಲಾಭ ಏನು?
ಹಿಂದಿನಂತೆ 5 ಸದಸ್ಯರ ಕುಟುಂಬಕ್ಕೆ ತಿಂಗಳಿಗೆ 50 ಕೆಜಿ ಅಕ್ಕಿ ಬರುತ್ತಿತ್ತು. ಇದರ ಬಹುಪಾಲು ಬಳಕೆಯಾಗದೆ ಉಳಿಯುತ್ತಿತ್ತು. ಈಗ ಸರ್ಕಾರದ ಹೊಸ ಕ್ರಮದಿಂದ ಆಹಾರ ಕಿಟ್‌ನಲ್ಲಿ ಪೌಷ್ಟಿಕಾಂಶ ಹೆಚ್ಚಾಗುವುದರಿಂದ ಕುಟುಂಬಗಳಿಗೂ ನೈಜ ಲಾಭದೊರೆಯಲಿದೆ.
ಅಕ್ಕಿ ದುರ್ಬಳಕೆ & ಕಳ್ಳಸಾಗಣೆಗೆ ಕಡಿವಾಣ
ಹೆಚ್ಚುವರಿ ಅಕ್ಕಿಯ ಕಾರಣದಿಂದ ಅಕ್ಕಿ ದುರ್ಬಳಕೆ ಮತ್ತು ಕಳ್ಳಸಾಗಣೆ ಪ್ರಕರಣಗಳು ಹೆಚ್ಚುತ್ತಿವೆ ಎಂಬ ವರದಿಯ ಹಿನ್ನೆಲೆಯಲ್ಲಿ ಸರ್ಕಾರವು ಈ ಕ್ರಮ ಕೈಗೊಂಡಿದೆ. ಹೊಸ ಯೋಜನೆಯಿಂದ ಅಕ್ಕಿಯ ದುರ್ಬಳಕೆ ತಡೆಯುವ ಜೊತೆಗೆ, ಅನ್ನಭಾಗ್ಯ ಯೋಜನೆಯ ಪಾರದರ್ಶಕತೆ ಹೆಚ್ಚುವ ನಿರೀಕ್ಷೆ ಇದೆ.
ರಾಜ್ಯಾದ್ಯಂತ ಲಾಭಾಂಶ
ಪ್ರಸ್ತುತ ರಾಜ್ಯದಲ್ಲಿ 1.26 ಕೋಟಿ ಪಡಿತರ ಕಾರ್ಡ್ ಗಳು ಇವೆ. ಇದರಡಿ ಸುಮಾರು 4.49 ಕೋಟಿ ಜನರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು. ಇವರು ಎಲ್ಲರೂ ಇ೦ದಿನಿ೦ದ ‘ಇಂದಿರಾ ಆಹಾರ ಕಿಟ್’ ಸೌಲಭ್ಯವನ್ನು ಪಡೆಯಲಿದ್ದಾರೆ.




