5 ವರ್ಷದೊಳಗಿನ ಮಕ್ಕಳಲ್ಲಿ ಟೋಮೋಟೋ ಜ್ವರ ಹೆಚ್ಚಾಗುತ್ತಿದ್ದು, ಕೇರಳ ಮತ್ತು ಒಡಿಶಾದಲ್ಲಿ ಹೆಚ್ಚಾಗಿರುವ ಟೊಮೊಟೊ ಫ್ಲೂ ಈಗ ದೇಶದ ಎಲ್ಲಾ ಕಡೆ ಹಬ್ಬುವ ಭೀತಿಯಿದ್ದು, ಕಳೆದ ಮೂರುವರೆ ತಿಂಗಳಲ್ಲಿ 82 ಪ್ರಕರಣಗಳು ಕಾಣಿಸಿಕೊಂಡಿವೆ.
ಹೌದು, ಚಿಕ್ಕ ಮಕ್ಕಳಲ್ಲಿ ತೀವ್ರವಾಗಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಹಲವು ಮಕ್ಕಳ ಮಾದರಿ ಸಂಗ್ರಹಿಸಲಾಗಿದೆ. ಈ ವರದಿಗಳು ಬಂದ ಬಳಿಕ ಭಾರತದಲ್ಲಿನ ಟೋಮೋಟೋ ಜ್ವರ ಪ್ರಕರಣಗಳು ಹೆಚ್ಚಾಗುವ ಆತಂಕ ಹೆಚ್ಚಾಗಿದ್ದು, ಕೇರಳದ ಜೊತೆ ಗಡಿ ಸಂಪರ್ಕ ಹೊಂದಿರುವ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡು ಹೈ ಅಲರ್ಟ್ ಘೋಷಿಸಿದೆ ಎಂದು ವೈದ್ಯಕೀಯ ವರದಿ ನಿಯತಕಾಲಿಕೆ ಲ್ಯಾನ್ಸೆಟ್ ಜರ್ನಲ್ ಹೇಳಿದೆ.
ಇನ್ನು, ಟೊಮೊಟೊ ಫ್ಲೂ 1 ರಿಂದ 5 ವರ್ಷದ ಮಕ್ಕಳಿಗೆ ಬಾಧಿಸುವ ಕಾಯಿಲೆಯಾಗಿದ್ದು, ಮೇ 6 ರಂದು ಮೊದಲ ಬಾರಿಗೆ ಟೊಮೊಟೊ ಫ್ಲೂ ದೇಶದಲ್ಲಿ ಪತ್ತೆಯಾಗಿತ್ತು. 5 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಟೋಮೋಟೋ ಜ್ವರದಿಂದ ಚರ್ಮದ ತುರಿಕೆ ಕಾಣಿಸಿಕೊಳ್ಳಲಿದ್ದು, ಮೈಕೈನೋವು, ಸಂಧಿ ಊತ, ನಿರ್ಜಲೀಕರಣ, ಆಯಾಸಗಳು ಕಾಣಿಸಿಕೊಳ್ಳುತ್ತದೆ. ದೇಶದಲ್ಲಿ ಟೊಮೆಟೋ ಜ್ವರ ನಿಧಾನವಾಗಿ ವ್ಯಾಪಿಸುತ್ತಿರುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.