ಹೊಸಪೇಟೆ (ವಿಜಯನಗರ ಜಿಲ್ಲೆ),ಜ.19: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ,ಕುರವತ್ತಿಯ ಮಲ್ಲಿಕಾರ್ಜುನ ಸ್ವಾಮಿ ಮತ್ತು ಬಸವೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ತ ಪೂರ್ವಭಾವಿ ಸಿದ್ಧತಾ ಸಭೆಯು ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನವರಿ 21ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ.
ಮೈಲಾರದ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವವು ಫೆಬ್ರುವರಿ 08 ರಿಂದ ಫೆಬ್ರುವರಿ 19 ರವರೆಗೆ ಜರುಗಲಿದ್ದು, ಮತ್ತು ಫೆಬ್ರುವರಿ 18 ರಂದು ಕಾರ್ಣಿಕೋತ್ಸವ ನಡೆಯುತ್ತದೆ ಹಾಗೂ ಕುರವತ್ತಿಯ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ವಾರ್ಷಿಕ ರಥೋತ್ಸವ ಮಾರ್ಚ್ 02 ರಂದು ನಡೆಯಲಿದ್ದು, ಈ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯ ತಡೆಗಟ್ಟುವಿಕೆ ಮತ್ತು ಕೋವಿಡ್ ನಿಯಮಗಳ ಸಮರ್ಪಕ ಪಾಲನೆಯೊಂದಿಗೆ ಆಚರಿಸುವ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಇನ್ನು, ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್, ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ಅವರ ಉಪಸ್ಥಿತಿಯಲ್ಲಿ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಯಲಿದ್ದು, ಈ ಸಭೆಗೆ ಅಧಿಕಾರಿಗಳು ಯಾವುದೇ ಪ್ರತಿನಿಧಿಗಳನ್ನು ನಿಯೋಜಿಸದೇ ಕಳೆದ ವರ್ಷ ಕೈಗೊಂಡಿರುವ ಕ್ರಮಗಳ ಬಗ್ಗೆ ಪೂರಕ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.