ಅಬುದಾಬಿ : ಐಪಿಎಲ್ -2020 ರ 13 ಆವೃತ್ತಿಯಲ್ಲಿ ಶೇಖ್ ಜಾಯೆದ್ ಸ್ಟೇಡಿಯಂ ನಲ್ಲಿ ನಡೆದ 20 ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 57 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
194 ರನ್ ಗುರಿಯನ್ನು ಬೆನ್ನಟ್ಟಿದ ರಾಜಸ್ತಾನ್ ರಾಯಲ್ಸ್ ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ನಲುಗಿ 18.1 ಓವರ್ ಗಳಲ್ಲಿ ತನ್ನೆಲ್ಲಾ 10 ವಿಕೆಟ್ ಗಳನ್ನು ಕಳೆದುಕೊಂಡು 136 ರನ್ ಗಳಿಸಿ 57 ರನ್ ಗಳಿಂದ ಸೋಲಿಗೆ ಶರಣಾಯಿತು. ರಾಜಸ್ತಾನ್ ರಾಯಲ್ಸ್ ಪರ, ಜೋಸ್ ಬಟ್ಲರ್-70, ಜೊಫ್ರಾ ಆರ್ಚರ್-24, ರನ್ ಗಳಿಸಿದ್ದು ಬಿಟ್ಟರೆ, ಉಳಿದವರಿಂದ ಉತ್ತಮ ಆಟ ಕಂಡುಬರಲಿಲ್ಲ. ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್, ಟ್ರೆಂಟ್ ಬೋಲ್ಟ್, ಜೇಮ್ಸ್ ಪ್ಯಾಟಿನ್ಸನ್ ತಲಾ 2 ವಿಕೆಟ್ ಪಡೆದು ತಂಡದ ಯಶಸ್ಸಿಗೆ ಕಾರಣರಾದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್-23, ನಾಯಕ ರೋಹಿತ್ ಶರ್ಮಾ-35, ಸೂರ್ಯ ಕುಮಾರ್ ಯಾದವ್-79*, ಹಾಗೂ ಹಾರ್ದಿಕ್ ಪಾಂಡ್ಯ-30* ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು. ರಾಜಸ್ತಾನ್ ಪರ, ಶ್ರೇಯಸ್ ಗೋಪಾಲ್ 2 ವಿಕೆಟ್, ಜೊಫ್ರಾ ಆರ್ಚರ್ ಮತ್ತು ಕಾರ್ತಿಕ್ ತ್ಯಾಗಿ ತಲಾ ಒಂದು ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ ಪರ ಅಮೋಘ ಪ್ರದರ್ಶನ ನೀಡಿ ಅಜೇಯ 79 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದ ಸೂರ್ಯ ಕುಮಾರ್ ಯಾದವ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರರು.
ಇದನ್ನು ಓದಿ: ರಸ್ತೆ ಅಪಘಾತದಲ್ಲಿ ಅಫ್ಘಾನಿಸ್ತಾನದ ಯುವ ಕ್ರಿಕೆಟ್ ಆಟಗಾರ ದುರ್ಮರಣ