ದಾವಣಗೆರೆ: ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ಮೃತಪಟ್ಟ ತಾಯಿ ಮಗುವಿನ ಅಂತ್ಯ ಸಂಸ್ಕಾರ ಇಂದು ದಾವಣಗೆರೆಯಲ್ಲಿ ಜರುಗಲಿದೆ.
ಹೌದು, ದಾವಣಗೆರೆಯ ಪ್ರತಿಷ್ಠಿತ ಶ್ರೀ ಭವಾನಿ ಬುಕ್ ಡಿಪೋ ಮಂಡಿಪೇಟೆ ಮಾಲೀಕರಾದ ಶ್ರೀ ಮದನ್ ಗುಜ್ಜರ್ ಇವರ ಮಗಳು ಶ್ರೀಮತಿ ತೇಜಸ್ವಿನಿ ಸುಲಾಖೆ ಮತ್ತು ಅವರ ಮಗು ಬೆಂಗಳೂರು ಮೆಟ್ರೋ ಕಾಮಗಾರಿಯಲ್ಲಿ ಪಿಲ್ಲರ್ ಕುಸಿದು ಬಿದ್ದು ಮೃತಪಟ್ಟಿದ್ದು, ಮೃತರ ಅಂತ್ಯಕ್ರೀಯೆ ಇಂದು ಪಿ. ಬಿ ರಸ್ತೆ ವೈಕುಂಠ ಧಾಮದಲ್ಲಿ ನೆರವೇರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಐವರ ವಿರುದ್ಧ ಎಫ್ಐಆರ್ ದಾಖಲು: 10 ಲಕ್ಷ ರೂಪಾಯಿ ಪರಿಹಾರ
ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ತಾಯಿ-ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರ ವಿರುದ್ಧ ನಗರದ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ತೇಜಸ್ವಿನಿ ಪತಿ ಲೋಹಿತ್ ಕುಮಾರ್ ನೀಡಿದ ದೂರು ಆಧರಿಸಿ ಬಿಎಂಆರ್ ಸಿಎಲ್ ಸೈಟ್ ಇಂಜಿನಿಯರ್, ಕಂಟ್ರ್ಯಾಕ್ಟರ್ಸ್, ಆಫೀಸರ್ಸ್, ಸೈಟ್ ಇನ್‌ಚಾರ್ಜ್ ಆಫೀಸರ್ಸ್ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದ್ದು, ಬಿಎಂಆರ್ ಸಿಎಲ್ ಕೂಡ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.